ಶಂಕಿತ ಉಗ್ರರ ಬಂಧನ ಸುಳ್ಳು ಸುದ್ದಿ:ಐಜಿಪಿ ಕೆ.ಟಿ.ಬಾಲಕೃಷ್ಣ

ಮೈಸೂರು: ಶ್ರೀರಂಗಪಟ್ಟಣದಲ್ಲಿ ಶಂಕಿತ ಉಗ್ರರನ್ನು ರಾಷ್ಟ್ರೀಯ ಭದ್ರತಾ ಪಡೆ ಬಂಧಿಸಿದೆ ಎಂಬುದು ಸುಳ್ಳು ಸುದ್ದಿ ಎಂದು ದಕ್ಷಿಣ ವಲಯ ಪ್ರಭಾರ ಐಜಿಪಿ ಹಾಗೂ ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಸ್ಪಷ್ಟಪಡಿಸಿದರು.

ದೆಹಲಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗಳ ಯಾವುದೇ ಅಧಿಕಾರಿಗಳು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿಲ್ಲ. ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ. ದಸರೆಗೆ ಉಗ್ರರ ಭೀತಿ ಇಲ್ಲ ಎಂದು ಅವರು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸುದ್ದಿ ಹೇಗೆ ಹುಟ್ಟಿತೋ ಗೊತ್ತಾಗುತ್ತಿಲ್ಲ. ಯಾರೂ ಸುಳ್ಳು ಸುದ್ದಿಯನ್ನು ಹರಡಿ ಜನರಲ್ಲಿ ಭೀತಿ ಸೃಷ್ಟಿಸಬಾರದು ಎಂದು ಮನವಿ ಮಾಡಿದರು.

ಈ ಬಾರಿ ದಸರೆಯ ಜಂಬೂಸವಾರಿ ಸಾಗುವ ಮಾರ್ಗದಲ್ಲಿ 3,600 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿರುವ 300ಕ್ಕೂ ಹೆಚ್ಚಿನ ಸಿಸಿಟಿವಿಗಳ ದೃಶ್ಯಗಳನ್ನು ನೇರವಾಗಿ ಮೊಬೈಲ್ ಮೂಲಕವೇ ನೋಡಬಹುದಾಗಿದೆ. ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ. ಪ್ರವಾಸಿಗರು ಯಾವುದೇ ಭೀತಿ ಇಲ್ಲದೇ ದಸರೆಯಲ್ಲಿ ಪಾಲ್ಗೊಳ್ಳಬಹುದು ಎಂದರು.

ಈ ಬಾರಿ ಜಂಬೂಸವಾರಿಗೆ ಕನಿಷ್ಠ ಎಂದರೂ 15 ಲಕ್ಷ ಮಂದಿ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಕಳೆದ ವರ್ಷ 10ರಿಂದ 12 ಲಕ್ಷ ಮಂದಿ ಬಂದಿದ್ದರು. ಎಲ್ಲೆಡೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು

Leave a Reply

Your email address will not be published. Required fields are marked *

error: Content is protected !!