ಲಾಕ್‌ಡೌನ್ ಉಲ್ಲಂಘಿಸಿದರೆ ಬಂಧಿಸಿ: ಜಿಲ್ಲಾಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ 21 ದಿನಗಳ ಲಾಕ್ ಡೌನ್ ಅನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫ್ರೆನ್ಸ್ ನಡೆಸಿದ ಮುಖ್ಯಮಂತ್ರಿಗಳು, ಲಾಕ್ ಡೌನ್ ಮೀರಿ ಹೊರಬರುವವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಿ, ಎಲ್ಲಾ ಜಿಲ್ಲೆಯ ಗಡಿಗಳನ್ನು ಸೀಲ್ ಮಾಡುವಂತೆ, ವಿಶೇಷವಾಗಿ ಕಾಸರಗೋಡು ಮೂಲಕ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ.
ಈಗಾಗಲೇ ಡಿಸ್ಟಲರಿ ಕಂಪನಿಗಳ ಜೊತೆ ಸ್ಯಾನಿಟೈಸರ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದ್ದು, ಕೆಲವು ಕಂಪನಿಗಳ ಉಚಿತವಾಗಿ ನೀಡಲು ಮುಂದೆ ಬಂದಿವೆ. ಸಮಸ್ಯೆಗಳೇನೇ ಇದ್ದರೂ ಕೂಡಲೇ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಎಂದರು.
ಇಡೀ ರಾಜ್ಯದಲ್ಲಿ ಖಾಸಗಿ ಕ್ಲಿನಿಕ್ ಗಳು ಬಂದ್ ಮಾಡುವ ಹಾಗಿಲ್ಲ. ಕ್ಲಿನಿಕ್ ಬಂದ್ ಮಾಡುವವರ ವಿರುದ್ದ ಕ್ರಮಕೈಗೊಳ್ಳುತ್ತೇವೆ. ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲು ಹಾಗೂ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಬೆಡ್ ಕೋವಿಡ್ ಗಾಗಿ ಮೀಸಲಿಡಬೇಕು. ವೈದ್ಯರು ಮತ್ತು ನರ್ಸ್ ಗಳಿಗೆ ತೊಂದರೆ ಕೊಡುವ ಮನೆ ಮಾಲೀಕರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.