ಸಿಎಎ ವಿರೋಧಿ ಪ್ರತಿಭಟನೆ: ಪಿಎಫ್ಐ ನಡುವೆ ಆರ್ಥಿಕ ನಂಟು ಪತ್ತೆ ಹಚ್ಚಿದ ಇಡಿ
ನವದೆಹಲಿ: ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತು ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಡುವೆ ಹಣಕಾಸಿನ ನಂಟು ಇರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ ಎಂದು ಸೋಮವಾರ ಅಧಿಕೃತ ಮೂಲಗಳು ತಿಳಿಸಿವೆ.
ಸಂಸತ್ತಿನಲ್ಲಿ ಪೌರತ್ವ ತಿದ್ದಪಡಿ ಕಾಯ್ದೆ ಅಂಗೀಕಾರಗೊಂಡ ದಿನದಿಂದ ಇಂದಿನವರೆಗೆ ನೂತನ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ಈ ಮಧ್ಯೆ, ಪಿಎಫ್ಐ ವಿರುದ್ಧ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಇಡಿ ತನಿಖೆ ನಡೆಸುತ್ತಿದ್ದು, ಇತ್ತೀಚಿನ ತನಿಖೆಯಲ್ಲಿ ಆಘಾತಕಾರಿ ಹೊಸ ವಿಷಯಗಳು ಬಹಿರಂಗಗೊಂಡಿವೆ. ಸಂಸತ್ತಿನಲ್ಲಿ ಸಿಎಎ ಅಂಗೀಕಾರಗೊಂಡ ನಂತರ ಪಶ್ಚಿಮ ಉತ್ತರ ಪ್ರದೇಶದ ವಿವಿಧ ಬ್ಯಾಂಕ್ ಖಾತೆಗಳಿಗೆ ಕನಿಷ್ಠ 120 ರೂಪಾಯಿ ಜಮೆಯಾಗಿರುವುದು ಪತ್ತೆಯಾಗಿದ್ದು, ಈ ಹಣವನ್ನು ಸಿಎಎ ವಿರೋಧಿ ಪ್ರತಿಭಟನೆಗೆ ಬಳಸಿಕೊಳ್ಳಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ಸಿಎಎ ವಿರೋಧಿ ಪ್ರತಿಭಟನೆ ಮತ್ತು ಪಿಎಫ್ಐ ನಡುವಿನ ಆರ್ಥಿಕ ನಂಟಿನ ಕುರಿತು ಜಾರಿ ನಿರ್ದೇಶನಾಲಯ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟು ವಿವಿಧ ಬ್ಯಾಂಕಿನ 73 ಖಾತೆಗಳ ಪರಿಶೀಲನೆಯಿಂದ ತನಿಖೆಗೆ ಹೆಚ್ಚು ಮಾಹಿತಿ ಸಿಕ್ಕಿದೆ. ಈ ಖಾತೆಗಳಿಗೆ 120 ಕೋಟಿ ರೂಪಾಯಿ ಜಮೆ ಆಗಿತ್ತು. ಸ್ವಲ್ಪ ಮಾತ್ರ ಉಳಿಸಿ, ಉಳಿದ ಎಲ್ಲ ಮೊತ್ತವನ್ನು ಬಳಸಲಾಗಿದೆ.
ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ, ಹಿಂಸಾಚಾರ, ಅಗ್ನಿಸ್ಪರ್ಶ, ವಿಧ್ವಂಸಕ ಕೃತ್ಯಗಳ ಹಿಂದೆ ಎಫ್‌ಐ ಪಾತ್ರ ಇದ್ದು, ಅದನ್ನು ನಿಷೇಧಿಸಬೇಕು ಎಂದು ಉತ್ತರ ಪೊಲೀಸರು ಕೇಂದ್ರಕ್ಕೆ ಪತ್ರ ಸಹ ಬರೆದಿದ್ದರು.