ಸಂಸದ ಅನಂತಕುಮಾರ್ ಹೆಗಡೆಗೆ ಮಹಿಳೆಯರು ಹಾಗೂ ಗ್ರಾಮಸ್ಥರ ತೀವ್ರ ತರಾಟೆ
‘ವಿಪರೀತ ಮಳೆ ಸುರಿದಿರುವುದರಿಂದ ಹಾಗೂ ಹಳ್ಳ ತುಂಬಿ ಹರಿದಿದ್ದರಿಂದ ಸಾಕಷ್ಟು ಮನೆಗಳು ಹಾನಿಗೊಳಗಾಗಿವೆ. ಒಂದ್ಸಾರಿ ಬಂದು ನೋಡಿ…’ ಎಂದು ಸಂತ್ರಸ್ತರು ವಿನಂತಿಸಿಕೊಂಡಾಗ, ‘ಎಲ್ಲವನ್ನೂ ಅಧಿಕಾರಿಗಳೇ ನೋಡಿಕೊಳ್ಳುತ್ತಾರೆ’ ಎಂದು ಅನಂತಕುಮಾರ್ ಹಾರಿಕೆ ಉತ್ತರ ನೀಡಿದರು.
ಇದರಿಂದ ಕೋಪಗೊಂಡ ಮಹಿಳೆಯರು, ‘ಕಳೆದ ಹಲವು ದಿನಗಳಿಂದ ಸುರಿದ ಭಾರಿ ಮಳೆಗೆ ಹತ್ತಾರು ಮನೆಗಳು ಬಿದ್ದುಹೋಗಿವೆ. ಕಾಳು– ಕಡಿ ಕೊಚ್ಚಿಕೊಂಡು ಹೋಗಿವೆ. ಇದುವರೆಗೆ ಒಮ್ಮೆಯೂ ನಮ್ಮ ಕಷ್ಟ ಕೇಳಲಿಲ್ಲ. ಈಗ, ಸತ್ತಾಗ ಮಾತನಾಡಿಸಲು ಬರುವವರಂತೆ ಬಂದಿದ್ದೀರಿ. ಇಂತಹವರಿಗೆ ವೋಟ್ ಯಾಕಾದರೂ ಹಾಕಿದೇವೋ’ ಎಂದು ನೆರೆದಿದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಸಂಸದರ ಆಪ್ತರೊಬ್ಬರತ್ತ ಕೈ ಮಾಡಿ ಮಾತನಾಡಿದ ಮಹಿಳೆಯರು, ‘ಇವನಿಗೆ ವೋಟ್ ಹಾಕಬೇಕೆಂದು ಕೇಳಿಕೊಂಡು ನಮ್ಮ ಸಂಘಕ್ಕ ಕರ್ಕೊಂಡು ಬಂದಿದ್ರಿ. ಈಗ ನೋಡ್ ಇವ್ರ ಮಾತಾಡೋದ್ನ. ಇನ್ ಮ್ಯಾಲ್ ಇವನಿಗೆ ವೋಟ್ ಹಾಕಾಂಗಿಲ್ಲ…’ ಎಂದು ಏಕವಚನದಲ್ಲೇ ಕೂಗಾಡಿದರು.
‘ಪ್ರವಾಹದಿಂದಾಗಿ 17 ಚೀಲ ಕಾಳು ತೊಯ್ದಾವು. ಮುಂದೆ ಹೀಗಾಗದಂತೆ ತಡೆಯಲು ಶಾಶ್ವತ ಪರಿಹಾರ ರೂಪಿಸಬೇಕು’ ಎಂದು ಗ್ರಾಮಸ್ಥರೊಬ್ಬರು ಅನಂತಕುಮಾರ್ ಅವರಿಗೆ ಒತ್ತಾಯಿಸಿದರು. ತೀವ್ರ ಗೊಂದಲದಿಂದಾಗಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಕ್ಷಣ ಹೊತ್ತು ಕೇಳಿಸದಂತಾಯಿತು.
ವಿಡಿಯೊ ಮಾಡದಿರಲು ಸೂಚನೆ: ಈ ಘಟನೆಯನ್ನು ಯುವಕನೊಬ್ಬ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದರು. ಇದನ್ನು ನೋಡಿದ ಅನಂತಕುಮಾರ್ ಅವರು, ಚಿತ್ರೀಕರಿಸದಂತೆ ತಾಕೀತು ಮಾಡಿದರು. ಮೊಬೈಲ್ ಕಸಿದುಕೊಳ್ಳಲು ಮುಂದಾದರು. ಆಗ ಸ್ಥಳೀಯರು ತೀವ್ರವಾಗಿ ಪ್ರತಿಭಟಿಸಿದರು. ಇದರಿಂದ ಬೇಸರಗೊಂಡ ಅವರು, ಅಲ್ಲಿಂದ ಹೊರಟುಹೋದರು. ಅವರ ಜೊತೆ ಶಾಸಕ ಮಹಾಂತೇಶ ದೊಡ್ಡಗೌಡರ ಹೆಜ್ಜೆಹಾಕಿದರು.