ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ಅನಂತ್‌ ಹೆಗಡೆ: ಕ್ಷಮೆಗೆ ಬಿಜೆಪಿ ಸೂಚನೆ

ನವದೆಹಲಿ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಈಗ ಮತ್ತೊಮ್ಮೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಿದ್ದು, ಈ ಸಂಬಂಧ ಬೇಷರತ್ ಕ್ಷಮೆಯಾಚಿಸುವಂತೆ ಮಾಜಿ ಕೇಂದ್ರ ಸಚಿವನಿಗೆ ಬಿಜೆಪಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಮಹಾತ್ಮ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು “ಡ್ರಾಮಾ” ಎಂದು ಕರೆದಿದ್ದ ಅನಂತ್‌ಕುಮಾರ್ ಹೆಗಡೆ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ, ಕ್ಷಮೆಯಾಚಿಸುವಂತೆ ತನ್ನ ಸಂಸದನಿಗೆ ಸೂಚಿಸಿದೆ.

ಮಹಾತ್ಮ ಗಾಂಧಿ ಏನು ಅಂತ ಇಡೀ ವಿಶ್ವಕ್ಕೆ ಗೊತ್ತು. ಆದರೆ ಅನಂತ್ ಕುಮಾರ್ ಹೆಗಡೆ ಹೇಳಿಕೆ ಅವರ ವೈಯಕ್ತಿಕ ಎಂದು ಬಿಜೆಪಿಯ ಹಿರಿಯ ನಾಯಕ ಜಗಂದಾಂಬಿಕಾ ಪಾಲ್ ಅವರು ಹೇಳಿದ್ದಾರೆ.

ಮಹಾತ್ಮ ಗಾಂಧೀಜಿ ಅವರಿಗೆ ದೇಶದಲ್ಲಿ ದೊಡ್ಡ ಗೌರವ ಇದೆ. ಹೆಗಡೆ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಕೇಂದ್ರ ಸಚಿವ ಅಶ್ವನಿ ಚೌಬೆ ಅವರು ಹೇಳಿದ್ದಾರೆ.

ಅನಂತ್‌ಕುಮಾರ್ ಹೆಗಡೆ  ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಡೀ ಸ್ವಾತಂತ್ರ್ಯ ಚಳವಳಿಯನ್ನು ಬ್ರಿಟಿಷರ ಒಪ್ಪಿಗೆ ಮತ್ತು ಬೆಂಬಲದೊಂದಿಗೆ ನಡೆಸಲಾಯಿತು ಮತ್ತು ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳುವಳಿ ಒಂದು “ಡ್ರಾಮಾ” ಆಗಿತ್ತೆಂದು ಹೇಳಿದ್ದರು.

ಅಲ್ಲದೆ “ಈ ನಾಯಕರನ್ನು ಎಂದೂ ಯಾರೊಬ್ಬ ಪೋಲೀಸರು ಹೊಡೆದಿಲ್ಲ. ಅವರ ಸ್ವಾತಂತ್ರ್ಯ ಚಳುವಳಿ ಒಂದು ದೊಡ್ಡ ನಾಟಕವಾಗಿತ್ತು. ಇದನ್ನು ಬ್ರಿಟಿಷರ ಅನುಮೋದನೆಯೊಂದಿಗೆ ಈ ನಾಯಕರು ಪ್ರದರ್ಶಿಸಿದರು. ಇದು ನಿಜವಾದ ಹೋರಾಟವಲ್ಲ. ಇದು ಹೊಂದಾಣಿಕೆ ಸ್ವಾತಂತ್ರ್ಯ ಹೋರಾಟ.

Leave a Reply

Your email address will not be published. Required fields are marked *

error: Content is protected !!