ಪುಲ್ವಾಮಾ ಮಾದರಿ ದಾಳಿಗೆ ಸಜ್ಜು, 27 ಉಗ್ರರಿಗೆ ತರಬೇತಿ: ಸ್ಫೋಟಕ ಮಾಹಿತಿ ಬಹಿರಂಗ
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಒಂದು ವರ್ಷವಾಗುತ್ತಾ ಬರುತ್ತಿರುವ ಸಂದರ್ಭದಲ್ಲಿ ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಬಾಲಕೋಟ್ ನಲ್ಲಿ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
ಭಾರತದ ವಿರುದ್ಧ ಬಹುದೊಡ್ಡ ಸಂಚು ರೂಪಿಸಿರುವ ಪಾಕಿಸ್ತಾನ ಜೈಶ್ ಎ ಮೊಹಮ್ಮದ್ ಸಂಘಟನೆಯ ಒಟ್ಟು 27 ಉಗ್ರರಿಗೆ ಭಾರತದೊಳಗೆ ನುಸುಳಿ ದಾಳಿ ನಡೆಸಲು ಬಾಲಕೋಟ್ ನಲ್ಲಿ ತರಬೇತಿ ನೀಡುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಆಫ್ಘಾನಿಸ್ತಾನದ ಉಗ್ರರು ಪಾಕಿಸ್ತಾನದ ಈ ಉಗ್ರರಿಗೆ ತರಬೇತಿ ನೀಡುತ್ತಿದ್ದು ಅವರಲ್ಲಿ 8 ಮಂದಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದವರಾಗಿದ್ದಾರೆ. ಬಾಲಾಕೋಟ್ ನ ಉಗ್ರರ ಶಿಬಿರವನ್ನು ನಡೆಸುತ್ತಿರುವುದು ಭಯೋತ್ಪಾದಕ ಮೌಲಾನಾ ಮಸೂದ್ ಅಝರ್ ಪುತ್ರ ಯೂಸಫ್ ಅಝರ್.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಇಬ್ಬರು ಉಗ್ರರು ಮತ್ತು ಆಫ್ಘಾನಿಸ್ತಾನದ ಮೂವರು ಈ 27 ಉಗ್ರರಿಗೆ ತರಬೇತಿ ನೀಡುತ್ತಿದ್ದಾರೆ. ಇದರಿಂದಾಗಿಯೇ ಉಗ್ರರಿಗೆ ಒಳನುಸುಳಲು ಸಹಾಯವಾಗಲು ಪಾಕಿಸ್ತಾನ ಪದೇ ಪದೇ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸುತ್ತಿರುವುದು ಎನ್ನಲಾಗಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಬೆಂಗಾವಲು ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಇದೇ ಫೆಬ್ರವರಿ 14ಕ್ಕೆ ಒಂದು ವರ್ಷವಾಗುತ್ತಿದೆ. ಇದರಲ್ಲಿ 40 ಯೋಧರು ಹುತಾತ್ಮರಾಗಿದ್ದರು.