ಆಡಳಿತ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗೆ ರಾಜ್ಯದ ಎಲ್ಲ ಪ್ರಜೆಗಳೂ ಸಮಾನರು: ತೋನ್ಸೆ ಜಯಕೃಷ್ಣ ಶೆಟ್ಟಿ

ನನ್ನ ಸ್ನೇಹಿತರಲ್ಲಿ ನನ್ನದೊಂದು ಅರಿಕೆ. ಈ ಮೇಲಿನ ವೀಡಿಯೋ ತುಣುಕೊಂದರಲ್ಲಿ ನಮ್ಮ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಉತ್ತಮ ಸಂದೇಶವೊಂದನ್ನು ನೀಡಿದ್ದಾರೆ. ಸಮಾಜದ ಶಾಂತಿ ಕಾಪಾಡುವ ಉದ್ದೇಶದಿಂದ ಜವಾಬ್ದಾರಿ ಸ್ಥಾನದಲ್ಲಿದ್ದು ಅದರಂತೆ ನಡೆದಿದ್ದಾರೆ. ಆದರೆ ಹಿಂದೂ ಸಮಾಜದ ಕೆಲವರು ಮುಖ್ಯಮಂತ್ರಿಗಳ ಈ ಸಂದೇಶದಿಂದ ಅತೃಪ್ತರಾಗಿದ್ದಾರೆ. ಅಷ್ಟೇ ಅಲ್ಲ ನನ್ನ ಸ್ನೇಹಿತರಲ್ಲೂ ಕೆಲವರು ಮುಖ್ಯಮಂತ್ರಿಗಳು ಮುಸ್ಲಿಂ ಜನಾಂಗವನ್ನು ಬೆಂಬಲಿಸಿ ತಪ್ಪೆಸಗಿದ್ದಾರೆಂದೇ ಅಭಿಪ್ರಾಯ ಪಡುತ್ತಿದ್ದಾರೆ. 

ಈ ಎಲ್ಲ ಚರ್ಚೆಗಳಿಗೆ ನಾನು ಈ ಕೆಳಗಿನಂತೆ ಸ್ಪಷ್ಟೀಕರಣವನ್ನು ನೀಡಲು ಬಯಸುತ್ತೇನೆ.ಕೋವಿದ್ ೧೯ ವೈರಸ್ ಹರಡುವಿಕೆಯ ಭಯದಿಂದ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳು ಸೇರಿದಂತೆ ಎಲ್ಲಾ  ಧರ್ಮಗಳ ಪವಿತ್ರಕ್ಷೇತ್ರಗಳು ಬಾಗಿಲು ಮುಚ್ಚಿವೆ. ಅದು ತಿರುಪತಿಯೇ ಇರಲಿ, ಕಾಬಾ-ಮಕ್ಕಾ ಇರಲಿ ವ್ಯಾಟಿಕನ್ ಚರ್ಚ್ ಆಗಿರಲಿ ಎಲ್ಲ ಕಡೆಗಳಲ್ಲೂ ಭಕ್ತರಿಗೆ ಪ್ರಾರ್ಥನೆಯ ಅವಕಾಶವನ್ನು ನಿರ್ಬಂಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ  ತಬ್ಲಿಘಿ ಮರ್ಕಜ್ ಪ್ರಾರ್ಥನೆ ಹಾಗೂ ತಬ್ಲಿಘಿ ಧರ್ಮಗುರುಗಳ ಒಟ್ಟುಸೇರುವಿಕೆ ಖಂಡಿತವಾಗಿಯೂ ಅಕ್ಷಮ್ಯ ಅಪರಾಧ. ನಿಜವಾಗಿಯೂ ಇದು ಮಾನವತೆಯ ವಿರುದ್ಧ ನಡೆದ ದ್ರೋಹ. 

ಈ ಕಾರ್ಯಕ್ರಮವನ್ನು ಸಂಯೋಜಿಸಿದವರ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ವಿರುದ್ಧ ಆಯಾ ರಾಜ್ಯಸರಕಾರಗಳು ಕಠಿನ ಕಾನೂನು ಕ್ರಮವನ್ನು ಕೈಗೊಳ್ಳಲೇ ಬೇಕು. ಅವರಿಂದಾಗಿ ವೈರಸ್ ಹರಡುವಿಕೆಯನ್ನು ತಡೆಯಲೇ ಬೇಕು. ಇಷ್ಟೇ ಅಲ್ಲ ನಮ್ಮ ಕರಾವಳಿ ಜಿಲ್ಲೆಗಳೂ ಸೇರಿದಂತೆ ನಮ್ಮ ದೇಶದಲ್ಲಿ ಕೆಲವು ಮುಸ್ಲಿಮ್ ಬಾಂಧವರು ಹಿಂದೂಗಳ ವಿರುದ್ಧ ಸಂಚನ್ನು ಹೂಡುತ್ತಿರುವುದೂ ಸತ್ಯ. ಇದಕ್ಕೆ ಪ್ರತಿಕ್ರಿಯೆಯೆಂಬಂತೆ ಕೆಲವು ಹಿಂದೂ ಸಂಘಟನೆಗಳವರೂ ಮುಸ್ಲಿಂ ಸಮುದಾಯದ ವಿರುದ್ಧ ಚಟುವಟಿಕೆಗಳಲ್ಲಿ ನಿರತರಾಗಿರುವುದೂ ಅಷ್ಟೇ ಸತ್ಯ. ಎರಡೂ ಕೋಮುಗಳವರೂ ಅವರವರ ದೃಷ್ಟಿಯಲ್ಲಿ ಸರಿಯೇ ಆಗಿರುತ್ತಾರೆ. ತಮ್ಮನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ನಮ್ಮ ಜಿಲ್ಲೆಗಳ ಶಾಂತಿ, ಸಮೃದ್ಧಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಈ ಎಲ್ಲ ವೈಮನಸ್ಸುಗಳು, ಪರಸ್ಪರ ಆರೋಪ ಪ್ರತ್ಯಾರೋಪಗಳು ಒಂದು ಬಾರಿ ಕೊನೆಗೊಳ್ಳಲೇಬೇಕು. ಇದು ದೇಶದ ಶಾಂತಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದಲೂ ಅಗತ್ಯವೇ ಹೌದು. ಇಲ್ಲಿಯ ಜನರು ತಮ್ಮ ಜಾತಿ, ಕೋಮು, ಧರ್ಮ ಭೇದ ಮರೆತು ಪರಸ್ಪರ ಸಹಕಾರದಿಂದ ಒಗ್ಗಟ್ಟಿನಿಂದ ಬಾಳಬೇಕು. ಗೌರವಾನ್ವಿತ ಯಡಿಯೂರಪ್ಪ ಅವರು ನಮ್ಮ ರಾಜ್ಯದ ರಾಜನಿದ್ದಂತೆ. ಚುನಾವಣೆಯಲ್ಲಿ ಒಂದು ಸಿದ್ಧಾಂತದ ಆಧಾರದ ಹಿನ್ನೆಲೆಯಲ್ಲಿ ಸ್ಪರ್ಧಿಸಿ ಗೆದ್ದು ಆಡಳಿತದ ಚುಕ್ಕಾಣಿ ಹಿಡಿದರೂ ರಾಜ್ಯದ ಮುಖ್ಯಸ್ಥನಾದ ಮೇಲೆ ಅವನಿಗೆ ರಾಜ್ಯದ ಎಲ್ಲ ಪ್ರಜೆಗಳೂ ಸಮಾನರು.ರಾಜನಾದವನು ಪ್ರಜೆಗಳ ಜಾತಿ, ಮತ, ಧರ್ಮಗಳ ಆಧಾರದಲ್ಲಿ ಭೇದಭಾವ ತೋರುವಂತಿಲ್ಲ. ಸಮಾಜದಲ್ಲಿ ಕೋಮುಸೌಹಾರ್ದತೆ-ಮತೀಯ ಸೌಹಾರ್ದತೆಯನ್ನು ಕಾಪಾಡುವುದು, ಶಾಂತಿಯನ್ನು ಕಾಪಾಡುವುದು ಆತನ ಹೊಣೆಯಾಗಿರುತ್ತದೆ.

 ಮಾನ್ಯ ಮುಖ್ಯಮಂತ್ರಿಯವರು ಮುಸ್ಲಿಮರ ಪರವಾಗಿ ನೀಡಿದ್ದಾರೆಂದು ಹೇಳುವ ಹೇಳಿಕೆಗಳು ರಾಜ್ಯದ ನಾಯಕನಾಗಿ ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಂತಿ ಕಾಪಾಡುವ ದೃಷ್ಟಿಯಿಂದ ನೀಡಿದ ಹೇಳಿಕೆಗಳೇ ಹೊರತು ಒಂದು ಕೋಮಿನ ಜನರ ಓಲೈಕೆಗಾಗಿ ನೀಡಿದವುಗಳಲ್ಲ ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಖ್ಯಸ್ಥನಾದ ನಾನು ಮುಖ್ಯಮಂತ್ರಿಗಳ ವಿರುದ್ಧದ ಟೀಕೆ-ಟಿಪ್ಪಣಿಗಳನ್ನು ಬಲವಾಗಿ ಖಂಡಿಸುತ್ತೇನೆ. ಇದೇ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳ ಮುಸ್ಲಿಂ ಸಹೋದರರಲ್ಲಿ ಒಂದು ವಿನಂತಿ. ದಯವಿಟ್ಟು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಹಿಂದೂ ಸಮಾಜದವರೊಂದಿಗೆ ಸಹೋದರಭಾವವನ್ನು ಬೆಳೆಸಿಕೊಳ್ಳಿ. ನಾನೊಬ್ಬ ರಾಜಕೀಯೇತರ ವ್ಯಕ್ತಿಯಾಗಿ ಸಮಾಜದ ಮೇಲಿನ ಕಳಕಳಿಯಿಂದ ಹೇಳುತ್ತಿರುವುದೇನೆಂದರೆ ನಮ್ಮ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆಯ ದೃಷ್ಟಿಯಿಂದ ಗಮನಿಸಿದರೆ ಎಲ್ಲವೂ ಸರಿಯಿಲ್ಲ ಎಂಬುದು ಸುಸ್ಪಷ್ಟ. ಬೂದಿ ಮುಚ್ಚಿದ ಕೆಂಡದಂತೆ ಹೊರಗಿಂದ ತಣ್ಣಗಿದ್ದರೂ ಒಳಗಿಂದ ಬಿಸಿ ಆರಿರುವುದಿಲ್ಲ. ಹಾಗಾಗಿ ಸಮಾಜದ ಎಲ್ಲ ಮತಗಳವರಲ್ಲಿ ನನ್ನ ಕೋರಿಕೆ ಏನೆಂದರೆ ದಯವಿಟ್ಟು ಎಲ್ಲರೂ ತಾವಾಗಿ ಮುಂದೆ ಬಂದು ಸಕಾರಾತ್ಮಕ ಹೇಳಿಕೆಗಳನ್ನು ನೀಡಿ. ಅವಶ್ಯ ಬಿದ್ದಲ್ಲಿ ದನಿಯೆತ್ತಿ. ಒಳಗಿಂದೊಳಗೇ ಕುದಿಯುತ್ತಿರುವ ಅಗ್ನಿಯನ್ನು ತಣ್ಣಗಾಗಿಸುವ ಪ್ರಯತ್ನವನ್ನು ಮಾಡಿ. ನನ್ನ ಈ ಮೇಲಿನ ನಿರ್ಭೀತ ಹೇಳಿಕೆಗಳು ಎರಡೂ ಜಿಲ್ಲೆಗಳ ಸಮೃದ್ಧಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಹೇಳಿದವುಗಳು ಹಾಗೂ ಇದನ್ನು ಸಕಾರಾತ್ಮಕ ದೃಷ್ಟಿಯಿಂದಲೇ ಸ್ವೀಕರಿಸಬೇಕು ಎಂಬುದು ನನ್ನ ಕೋರಿಕೆ. ಈ ಕೊರೋನ ವೈರಸ್‌ನ ಹರಡುವಿಕೆಯ ಭೀತಿ ಹಾಗೂ ಲಾಕ್‌ಡೌನ್‌ನ ಕಠಿನ ಪರಿಸ್ಥಿತಿಯಲ್ಲಿ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ನಮ್ಮ ಮುಖ್ಯಮಂತ್ರಿಗಳ ಶ್ರಮ ಶ್ಲಾಘನೀಯ ಹಾಗೂ ಅವರ ನಡೆಯನ್ನು ನಾನು ಬೆಂಬಲಿಸುತ್ತೇನೆ.ಭಗವಂತನು ನಿಮಗೆ ಶ್ರೇಯಸ್ಸನ್ನುಂಟುಮಾಡಲಿ ಸರ್. ಮೇಲಿನ ಎಲ್ಲಾ ಹೇಳಿಕೆಗಳು ನನ್ನ ವೈಯಕ್ತಿಕ ನೆಲೆಯವು ಹಾಗೂ ನನ್ನ ಎಲ್ಲ ಮಾತುಗಳಿಗೂ ನಾನು ಬದ್ಧನಾಗಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ನನ್ನ ಚಿಂತನೆ ದೋಷಪೂರಿತವೆನಿಸಿದರೆ ನನಗೆ ತಿಳಿಸಿ. ಹೌದೆನ್ನಿಸಿದರೆ ತಿದ್ದಿಕೊಳ್ಳಲು ನಾನು ಸಿದ್ಧನಿದ್ದೇನೆ.ತಮ್ಮ ಪ್ರೀತಿಯ
ತೋನ್ಸೆ ಜಯಕೃಷ್ಣ ಶೆಟ್ಟಿ
ಸ್ಥಾಪಕರು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಮತ್ತು ಅವಿಭಜಿತ ದಕ್ಷಿಣ ಕನ್ನಡ.

Leave a Reply

Your email address will not be published. Required fields are marked *

error: Content is protected !!