ಡಿಎನ್‌ಐ ಹೋಂ ಥಿಯೇಟರ್ ಜನಕ ಅಲೆಕ್ಸ್ ನಿಧನ, ಅಭಿಮಾನಿಗಳಿಗೆ ಆಘಾತ
ಉಡುಪಿ : ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ನಡೆಸಿದ ಉದ್ಯಾವರ ಫ್ರೆಂಡ್ಸ್ ನ ಉತ್ಸಾಹಿ ಸದಸ್ಯರಾಗಿದ್ದ, ಖ್ಯಾತ ಕ್ರಿಕೆಟ್ ಪಟು, ಸಂಘಟಕ ಅಲೆಕ್ಸ್ ಲುವಿಸ್ ಅವರ ನಿಧನ ಉದ್ಯಾವರ ಮತ್ತು ಅವರ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವುಂಟು ಮಾಡಿದೆ.
ತನ್ನ ಸ್ನೇಹಿತರೊಂದಿಗೆ ಮತ್ತು ತನ್ನ ತಂಡದ ಸದಸ್ಯರೊಂದಿಗೆ ಬೆಂಗಳೂರಿನ ಮೈದಾನದಲ್ಲಿ ಬುಧವಾರ ಸಂಜೆ ಆಟವಾಡಿದ ಬಳಿಕ ಸ್ನೇಹಿತರು ಅಲ್ಲಿಂದ ತೆರಳಿದ ಸಂದರ್ಭ ಮೈದಾನದಲ್ಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉದ್ಯಾವರ ಬೋಳಾರ್ ಗುಡ್ಡೆ ನಿವಾಸಿಯಾದ ದಿವಂಗತ ಗಾಸ್ಪರ್ ಲೂವಿಸ್ ಮತ್ತು ಅನ್ನಮ್ಮ ದಂಪತಿಗಳ ಮೂರು ಮಕ್ಕಳಲ್ಲಿ ಹಿರಿಯನವರಾಗಿರುವ ಅಲೆಕ್ಸ್ ಲುವಿಸ್ ಸರಳ ಸ್ವಭಾವದವರು. ತಂದೆ ದಿವಂಗತ ಗಾಸ್ಪರ್ ಲೂವಿಸ್ ಖ್ಯಾತ ಪ್ರೊಫೆಸರ್ ಆಗಿದ್ದು, ಪಾಟ್ನಾ, ಹಾಸನ ಸಹಿತ ಹಲವಾರು ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಡಿಸ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಗಾಸ್ಪರ್ ಲುವಿಸ್, ಎಐಸಿಸಿ ಯಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ತಾಯಿ ಅನ್ನಮ್ಮ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ.
ಅಲೆಕ್ಸ್ ಲುವಿಸ್ ತನ್ನ ಉನ್ನತ ವಿದ್ಯಾಭ್ಯಾಸದ ಬಳಿಕ ಬೆಂಗಳೂರಿನಲ್ಲಿ ತನ್ನ ಉದ್ಯೋಗವನ್ನು ಪ್ರಾರಂಭಿಸಿದರು. ಪತ್ನಿ ಸೀಮಾ ಲೂವಿಸ್ ಮತ್ತು ಮೂರು ಮಕ್ಕಳೊಂದಿಗೆ ಸಂತಸದ ಜೀವನವನ್ನು ಸಾಗಿಸುತ್ತಿದ್ದರು.
ಹಲವು ವರ್ಷಗಳ ಹಿಂದೆ ತನ್ನದೇ ಸ್ವಂತ ಉದ್ಯಮವನ್ನು ಆರಂಭಿಸಿ ಡಿಎನ್‌ಐ ಎಂಬ ಹೋಂ ಥಿಯೇಟರ್ ಸಂಸ್ಥೆಯನ್ನು ಆರಂಭಿಸಿದ್ದು, ಈ ಸಂಸ್ಥೆಯನ್ನು ವಿಶ್ವಮಟ್ಟದಲ್ಲಿ ಪ್ರಜ್ವಲಿಸಿದ ಕೀರ್ತಿ ಇವರದು. ಅಟೋಮೆಶಿನ್ ಹೋಂ ಥಿಯೇಟರ್ ಹಾಗೂ ದಿನ ಬಳಕೆಯ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪನ್ನವನ್ನು ನಡೆಸಿ, ಹಲವಾರು ಜನರಿಗೆ ಉದ್ಯೋಗವನ್ನು ಕೂಡ ನೀಡಿದ್ದರು. ಬೆಂಗಳೂರು ಸುತ್ತಮುತ್ತಲಿನ ಸ್ಥಳಗಳಲ್ಲಿ ಇಪ್ಪತ್ತಕ್ಕೂ ಅಧಿಕ ಫ್ರಾಂಚೈಸಿಗಳನ್ನು ಸ್ಥಾಪಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದರು.
ಅಲೆಕ್ಸ್ ಲೂವಿಸ್ ಓರ್ವ ಉತ್ತಮ ಕ್ರೀಡಾಪಟು. ಖ್ಯಾತ ಉದ್ಯಮಿಯಾದರೂ, ಕೂಡ ಸರಳ ಸ್ವಭಾವದ ಇವರು ಜಾತಿ ಮತ ಭೇದವಿಲ್ಲದೆ ಎಲ್ಲರೊಂದಿಗೂ ತನ್ನ ಸರಳತೆಯಿಂದ ಪ್ರೀತಿಪಾತ್ರರಾಗಿದ್ದರು. ಉದ್ಯಮದೊಂದಿಗೆ ಕ್ರಿಕೆಟಿನತ್ತ ಬಹುವಾಗಿ ಆಕರ್ಷಿತನಾದ ಅಲೆಕ್ಸ್ ಲೂವಿಸ್ ಉಡುಪಿಯಲ್ಲಿ ಪ್ರಥಮ ಬಾರಿಗೆ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಕೂಟದ ಯಶಸ್ವಿಯಲ್ಲಿ ಉದ್ಯಾವರ ಫ್ರೆಂಡ್ಸ್ ನ ಸದಸ್ಯರಾಗಿದ್ದರೂ ಕೂಡ. ಮೂರು ವರ್ಷಗಳ ಹಿಂದೆ ಸಿವೈಎ ಅಧ್ಯಕ್ಷ ಜೊಸ್ಸಿ ಫೆರ್ನಾಡಿಸ್ ಸ್ಮರಣಾರ್ಥ ಉದ್ಯಾವರದಲ್ಲಿ ಮೂರು ದಿನಗಳ ಹಗಲು ರಾತ್ರಿ ಪಂದ್ಯ ಕೂಟದ ಪ್ರಮುಖ ಸಂಘಟಕ ಮತ್ತು ಪ್ರಮುಖ ಪ್ರಾಯೋಜಕತ್ವ ವಹಿಸಿ ಯಶಸ್ವಿ ಕೂಡ ಆಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಕೂಟ, ಐಪಿಎಲ್, ಕೆಪಿಎಲ್ ನಂತಹ ಪ್ರಮುಖ ಪಂದ್ಯಾವಳಿಗಳಿಗೆ ತನ್ನದೇ ಸಂಸ್ಥೆಯಾದ ಡಿಎನ್‌ಐ ಅನ್ನು ಪ್ರಮುಖ ಪ್ರಾಯೋಜಕರಾಗಿ ಸಿದ್ದು ಇವರ ಕ್ರಿಕೆಟ್ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ವ್ಯವಸ್ಥಾಪಕ ನಿರ್ದೇಶಕರಾಗಿ ಡಿಎನ್‌ಐ ಸಂಸ್ಥೆಯನ್ನು ರಾಜ್ಯದಲ್ಲಿ ಆರಂಭಿಸಿ, ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದ ಕೀರ್ತಿ ಅಲೆಕ್ಸ್ ಲೂವಿಸ್ ರವರದು. ಕಳೆದ ಹಲವಾರು ತಿಂಗಳುಗಳಿಂದ ಡಿಎನ್‌ಐ ಸಂಸ್ಥೆಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ಕೂಟಗಳನ್ನು ನಡೆಸುತ್ತಿದ್ದು, ಹಲವಾರು ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಅವಕಾಶ ನೀಡಿದ್ದಾರೆ.
ಅಲೆಕ್ಸ್ ಲುವಿಸ್ ಪ್ರತಿಭಾವಂತ ಕ್ರಿಕೆಟ್ ಆಟಗಾರರಾಗಿದ್ದು, ಬ್ಯಾಟಿಂಗ್ ಬೌಲಿಂಗ್ ಮೂಲಕ ಹಲವು ಪಂದ್ಯಗಳ ವಿಜೇತ ಕ್ಕೆ ಕಾರಣವಾಗಿ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾಗಿದ್ದು ಇದೆ. ಇತ್ತೀಚೆಗೆ ಡಿಎನ್‌ಐ ಹೋಂ ಥಿಯೇಟರ್ ಪಂದ್ಯ ಕೂಟಗಳ ಪ್ರಮುಖ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಿದ್ದು ಇಲ್ಲಿ ಸ್ಮರಿಸಬಹುದು. ತಾನು ಬೆಳೆಯುತ್ತಿದ್ದು, ತನ್ನ ಸ್ನೇಹಿತರನ್ನು ಕೂಡ ಬೆಳೆಸಿದ್ದು, ಮಾತ್ರವಲ್ಲದೆ ತನ್ನ ಮಕ್ಕಳನ್ನು ಕೂಡ ಕ್ರಿಕೆಟಿಗೆ ಆಕರ್ಷಿಸಿದ್ದರು.
ಉಡುಪಿ ಜಿಲ್ಲೆಯಲ್ಲಿ ಮೊತ್ತ ಮೊದಲಿಗೆ ಆಟೋ ಮೆಷಿನ್ ಪರಿಚಯಿಸಿದ ಪ್ರಮುಖರು ಅಲೆಕ್ಸ್ ಲುವಿಸ್. ಬೆಂಗಳೂರು ಆಸುಪಾಸಿನಲ್ಲಿ ಇಪ್ಪತ್ತಕ್ಕೂ ಅಧಿಕ ಫ್ರಾಂಚೈಸಿಗಳನ್ನು ಸ್ಥಾಪಿಸಿ, ಮುನ್ನೂರಕ್ಕೂ ಅಧಿಕ ಮಂದಿಗೆ ಉದ್ಯೋಗವನ್ನು ನೀಡಿದ್ದರು. ಬಡವರ ಬಗ್ಗೆ ಅತೀವ ಕಾಳಜಿ ಇದ್ದ ಅಲೆಕ್ಸ್ ಲೂವಿಸ್ ಉದ್ಯಾವರಕ್ಕೆ ಬಂದರೆ, ತನ್ನ ಸ್ನೇಹಿತರೊಂದಿಗೆ ಉದ್ಯಾವರದ ಮೈದಾನದಲ್ಲಿ ಆಟ ಆಡದೆ ಬೆಂಗಳೂರಿಗೆ ತೆರಳುತ್ತಿರಲಿಲ್ಲ. ಸ್ವಲ್ಪ ಪರಿಚಯವಾದರೂ ಸಾಕು, ತನ್ನ ಆಪ್ತ ಸ್ನೇಹಿತರಂತೆ ಅವರಿಗೆ ಪ್ರೀತಿಯನ್ನು ನೀಡುವುದು, ಮಾತ್ರವಲ್ಲದೆ ಹಸನ್ಮುಖಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
‘ಅಲೆಕ್ಸ್ ಚತುರ ಸ್ವಭಾವದವರು, ಎಲ್ಲರೊಂದಿಗೂ ಬೆರೆತವರು. ಕ್ರಿಕೆಟ್ ಪಂದ್ಯ ಕೂಟ ನಡೆಸುವುದೆಂದರೆ ಅವರಿಗೆ ಅತೀವ ಇಷ್ಟ. ಎಲ್ಲದಕ್ಕೂ ಸಿದ್ಧವಾಗುತ್ತಿದ್ದರು. ಉಡುಪಿಯಲ್ಲಿ ಜರಗಿದ ಹೊನಲು ಬೆಳಕಿನ ಪ್ರಥಮ ಕ್ರಿಕೆಟ್ ಪಂದ್ಯ ಕೂಟಕ್ಕೆ ಅಲೆಕ್ಸ್ ಲೂವಿಸ್ ಅವರ ಚತುರತೆ ಮತ್ತು ಸಹಕಾರ ಮರೆಯಲು ಅಸಾಧ್ಯ. ಇವರ ಅಕಾಲಿಕ ಮರಣ ಉದ್ಯಾವರಕ್ಕೆ ಮತ್ತು ಕ್ರೀಡಾಭಿಮಾನಿಗಳಿಗೆ ತೀರಾ ಅಘಾತ ನೀಡಿದೆ’ ಎನ್ನುತ್ತಾರೆ ಅಲೆಕ್ಸ್ ಲೂವಿಸ್ ಅವರ ಆಪ್ತ ಸ್ನೇಹಿತ ಮತ್ತು ಉದ್ಯಾವರ ಫ್ರೆಂಡ್ಸ್ ನ ಮಾಜಿ ಗೌರವಾಧ್ಯಕ್ಷ ರೊನಾಲ್ಡ್ ಮನೋಹರ್ ಕರ್ಕಡ.
ದಿವಂಗತ ಅಲೆಕ್ಸ್ ಲೂವಿಸ್ ರವರ ಅಂತ್ಯಕ್ರಿಯೆಯು ನಾಳೆ 24, ಶುಕ್ರವಾರ ಸಂಜೆ 3.30 ಕ್ಕೆ ಉದ್ಯಾವರ ಪಂಚಾಯತ್ ಸಮೀಪ ಬೋಳಾರು ಗುಡ್ಡೆಯ ಸಿರಿಯನ್ ದೇವಾಲಯದಲ್ಲಿ ನಡೆಯಲಿದೆ ಎಂದು ದುಃಖತಪ್ತ ಕುಟುಂಬ ತಿಳಿಸಿದೆ.