ಅಜೆಕಾರು: ನವವಿವಾಹಿತ ಅಂಚೆಪೇದೆ ಆತ್ಮಹತ್ಯೆ
ಕಾರ್ಕಳ: ಕಾಲಿನ ಗುಣವಾಗದ ಗ್ಯಾಂಗ್ರೀನ್ ಗಾಯದಿಂದ ಬೇಸತ್ತು 10 ದಿನಗಳ ಹಿಂದಷ್ಟೇ ವಿವಾಹವಾಗಿದ್ದ ನವವಿವಾಹಿತನೋರ್ವ ಮಂಗಳವಾರ ಮುಂಜಾನೆ ತನ್ನ ಮನೆಯ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಕಕ್ಕೆಕಾಡು ಬಟ್ರ ದರ್ಖಾಸು ಭೋಜ ಪೂಜಾರಿ ಎಂಬವರ ಮಗ ವಸಂತ ಪೂಜಾರಿ (34) ಎಂಬವರೇ ನೇಣಿಗೆ ಶರಣಾದ ನವವಿವಾಹಿತ. ಮಂಗಳವಾರ ತಡರಾತ್ರಿ ವಂಸತ ಪೂಜಾರಿ ತಮ್ಮ ಮನೆಯ ತೋಟದ ಸಮೀಪದ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವೃತ್ತಿಯಲ್ಲಿ ದೊಂಡೇರಂಗಡಿ ಅಂಚೆಕಚೇರಿಯ ಪೋಸ್ಟ್‌ಮ್ಯಾನ್ ಆಗಿದ್ದ ವಸಂತ ಪೂಜಾರಿಯವರಿಗೆ ಕಳೆದ 5 ವರ್ಷಗಳ ಬೈಕ್ ನ ಸೈಲೆನ್ಸರ್ ತಗುಲಿ ಗಾಯವಾಗಿದ್ದು, ಈ ಗಾಯ ಬಳಿಕ ಗುಣವಾಗದೇ ಗ್ಯಾಂಗ್ರೀನ್‌ಗೆ ಪರಿವರ್ತನೆಯಾಗಿತ್ತು ಹೀಗಾಗಿ ಅವರು ಆಗಾಗ ಚಿಕಿತ್ಸೆ ಪಡೆಯುತ್ತಿದ್ದರು.
ಈ ನಡುವೆ ಅವರಿಗೆ ವಿವಾಹ ನಿಗದಿಯಾಗಿ ಕಳೆದ ಡಿಸೆಂಬರ್ 1 ರಂದು ಧರ್ಮಸ್ಥಳದಲ್ಲಿ ಹೊಸ್ಮಾರಿನ ಯುವತಿಯೊಂದಿಗೆ ವಿವಾಹವಾಗಿತ್ತು. ವಿವಾಹವಾದ ನಂತರ ಬೀಗರ ಔತಣಕೂಟದ ಬಳಿಕ ಸಂಪ್ರದಾಯದ ಪ್ರಕಾರ ವಧುವನ್ನು ತವರು ಮನೆಗೆ ಕಳುಹಿಸಲಾಗಿತ್ತು. ಮದುವೆಯ ಬಳಿಕ ವಸಂತ ಪೂಜಾರಿ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಮದುವೆ ದಿನ ತಮ್ಮನ್ನು ಹರಸಲು ಬಂದವರೊಡನೆಯೂ ಸರಿಯಾಗಿ ಮಾತನಾಡುತ್ತಿರಲ್ಲಿಲ್ಲವೆನ್ನಲಾಗಿದೆ.
ಇದಲ್ಲದೇ ವಸಂತ ಪೂಜಾರಿ ಮದುವೆಗೆ ಮುನ್ನ ತನ್ನ ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ಮಣಿಪಾಲ ಆಸ್ಪತ್ರೆಗೆ ಹೋಗಿಬಂದ ಬಳಿಕ ಸಾಕಷ್ಟು ಚಿಂತಾಕ್ರಾಂತರಾಗಿದ್ದರೆಂದು ಹೇಳಲಾಗುತ್ತಿದೆ. ತನ್ನ ಕಾಲಿನ ಗಾಯದ ಕುರಿತು ಪತ್ನಿ ಹಾಗೂ ಆಕೆಯ ಮನೆಯವರಿಗೆ ತಿಳಿದರೆ ಸಮಸ್ಯೆಯಾಗಬಹುದೆನ್ನುವ ಕಾರಣಕ್ಕೆ ನೊಂದು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.