ಆಗುಂಬೆ ಘಾಟ್ 7ನೇ ತಿರುವು: ಕಾರಿನಲ್ಲಿ ಬಿದ್ದ ಹೆಣ್ಣು ಮಗು ಏನಾಯಿತು ಗೊತ್ತಾ!
ತೀರ್ಥಹಳ್ಳಿ: ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೆಯ ತಿರುವಿನಲ್ಲಿ ಹೆಣ್ಣು ಮಗುವೊಂದು ಪತ್ತೆಯಾಗಿದೆ. ನಿನ್ನೆ ರಾತ್ರಿ ಒಂಭತ್ತೂವರೆ ಸಮಯದಲ್ಲಿ ಕಾರೊಂದು ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿರುವಾಗ ಘಾಟಿಯಲ್ಲಿ ಐದು ವರ್ಷದ ಹೆಣ್ಣು ಮಗುವೊಂದು ಅಳುತ್ತಾ ನಿಂತಿರುವುದನ್ನು ನೋಡಿ ಕಾರು ಚಾಲಕ ತಕ್ಷಣ ಇಳಿದು ಮಗುವನ್ನು ಕರೆದುಕೊಂಡು ಹೋಗಿ ಆಗುಂಬೆ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ಮಗು ಆಗುಂಬೆ ಠಾಣೆಯಲ್ಲಿ ಸುರಕ್ಷಿತವಾಗಿತ್ತು. ಮಗುವಿನ ಪೋಷಕರು ಯಾರು ಎಂದು ಪೋಲಿಸರು ಪತ್ತೆಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಚಿಕ್ಕಮಂಗಳೂರು ಜಿಲ್ಲೆಯ ಎನ್‌ಆರ್ ಪುರ ಮೂಲದವರಾದ ಬೀನು ಎಂಬುವವರು ಕುಟುಂಬ ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು ಎನ್ನಲಾಗಿದೆ. ಪ್ರವಾಸದಿಂದ ವಾಪಾಸ್ಸು ಬರುವಾಗ ರಾತ್ರಿ ಸಮಯವಾಗಿದ್ದರಿಂದ ಗಾಡಿಯಲ್ಲಿ ಪೋಷಕರು ನಿದ್ರೆಗೆ ಜಾರಿದ್ದರು. ಹಿಂದಿನ ಡೋರ್ ಅಚಾನಕ್ ತೆರೆದಿದ್ದರಿಂದ ಮಗು ಏಳನೆಯ ಕ್ರಾಸ್ ನಲ್ಲಿ ಹೊರಗೆ ಬಿದ್ದಿದೆ. ಆದರೆ ಪೋಷಕರು ನಿದ್ರೆಯಲ್ಲಿದ್ದರಿಂದ ಮಗು ಬಿದ್ದಿರುವುದು ತಿಳಿಯಲಿಲ್ಲ. ಗಾಡಿ ಹಾಗೆಯೇ ಮುಂದೆ ಚಲಿಸಿದೆ. ಆದರೆ ಎನ್ ಆರ್ ಪುರ ಹೋಗುವಾಗ ಮಾರ್ಗ ಮಧ್ಯೆ ಕೊಪ್ಪ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡ ಪೋಷಕರು ಮಗು ಆನ್ವಿ ಗಾಡಿಯಲ್ಲಿ ತಮ್ಮ ಜೊತೆ ಇಲ್ಲದಿರುವುದನ್ನು ಗಮನಿಸಿ ಗಾಬರಿಗೊಂಡು ತಕ್ಷಣ ಅದೆ ಮಾರ್ಗವಾಗಿ ವಾಪಾಸು ಮಗುವನ್ನು ಹುಡುಕುತ್ತಾ ಬಂದಿದ್ದಾರೆ. ಬರುವಾಗ ಆಗುಂಬೆ ಫಾರೆಸ್ಟ್ ಗೇಟ್‌ನಲ್ಲಿ ಮಗು ಠಾಣೆಯಲ್ಲಿ ಇರುವ ವಿಷಯ ಗೊತ್ತಾಗಿದೆ. ವಿಷಯ ತಿಳಿದ ಪೋಷಕರು ಠಾಣೆಗೆ ತೆರಳಿದ್ದಾರೆ.ಪೊಲೀಸರು ತಂದೆತಾಯಿಯರಿಗೆ ಎಚ್ಚರಿಕೆ ನೀಡಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.