ಉಡುಪಿಯಲ್ಲಿ ಫೆ.8 ರಿಂದ ಕೃಷಿ ಸಾಲ ಅಭಿಯಾನ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಕೃಷಿ ಉದ್ದೇಶಕ್ಕಾಗಿ ರೈತರಿಗೆ ಕೃಷಿ ಸಾಲ ನೀಡಲು ಫೆಬ್ರವರಿ 8
ರಿಂದ 24 ರ ವರೆಗೆ ಕೃಷಿ ಸಾಲ ಅಭಿಯಾನವನ್ನು ಜಿಲ್ಲೆಯ ಎಲ್ಲಾ ಸರಕಾರಿ, ಗ್ರಾಮೀಣ, ಜಿಲ್ಲಾ ಸಹಕಾರಿ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್‍ಗಳಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ ನೀಡುತ್ತಿದ್ದು, ದೇಶದಾದ್ಯಂತ 9.22 ಕೋಟಿ ರೈತರು ಈ ಯೋಜನೆಯಲ್ಲಿ ನೊಂದಾವಣೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ 134217 ರೈತರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೊಂದಾವಣೆಯಾಗಿರುವ ರೈತರಲ್ಲಿ ಕೇವಲ 30940
ರೈತರು ಮಾತ್ರ ಬೆಳೆಸಾಲ ಯೋಜನೆಯ ಪ್ರಯೋಜನ ಪಡೆದಿದ್ದು, 103277 ರೈತರು ಬೆಳೆಸಾಲ ಯೋಜನೆಯಿಂದ ವಂಚಿತರಾಗಿದ್ದು, ಈ ರೈತರು ಬೆಳೆಸಾಲ ಪಡೆಯಲು ಅರ್ಹರಾಗಿದ್ದರೂ ಸಹ ಇದುವರೆಗೊ ಬೆಳೆಸಾಲ ಪಡೆಯದೇ ಇರುವುದರಿಂದ,
ಈ ರೈತರ ಅಭಿವೃಧ್ದಿಯ ದೃಷ್ಠಿಯಿಂದ ಫೆಬ್ರವರಿ 8 ರಿಂದ 24 ರ ವರೆಗೆ ಕೃಷಿ ಸಾಲ ಅಭಿಯಾನವನ್ನು ಜಿಲ್ಲೆಯಾದ್ಯಂತ ಎಲ್ಲಾ ಬ್ಯಾಂಕ್‍ಗಳಲ್ಲಿ ಆಯೋಜಿಸಲಾಗಿದ್ದು, ರೈತರು ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ
ಜಿ.ಜಗದೀಶ್ ತಿಳಿಸಿದ್ದಾರೆ.


ಕೃಷಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ರೈತರಿಗೆ ಯಾವುದೇ ವಿಳಂಬ ಮಾಡದೇ ಶೀಘ್ರದಲ್ಲಿ ಸಾಲ ಮಂಜೂರು ಮಾಡುವಂತೆ ಈಗಾಗಲೇ ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದ್ದು, ಕೃಷಿ ಸಾಲ ಪಡೆಯುವಲ್ಲಿ ರೈತರಿಗೆ ಸಮಸ್ಯೆಗಳಾದಲ್ಲಿ
ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ರುದ್ರೇಶ್ ದೂರವಾಣಿ ಸಂಖ್ಯೆ. 9449860858 ಹಾಗೂಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್ ದೂ.ಸಂಖ್ಯೆ.8277932501 ಅವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಲೀಡ್‍ಬ್ಯಾಂಕ್ ಮೆನೇಜರ್ ರುದ್ರೇಶ್, ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!