ವಕೀಲರು ಶುಲ್ಕ ಪಡೆಯುವುದು ಸೋಲು–ಗೆಲುವಿಗಾಗಿ ಅಲ್ಲ, ವಾದಮಂಡನೆಗೆ

ಉಡುಪಿ: ವಕೀಲರು ಮೈದಾನದಲ್ಲಿ ಮಾತ್ರವಲ್ಲ, ವೃತ್ತಿ ಜೀವನದಲ್ಲಿಯೂ ಕ್ರೀಡಾ
ಸ್ಫೂರ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಎಸ್‌.
ಅಬ್ದುಲ್‌ ನಜೀರ್‌ ಹೇಳಿದರು.

ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಉಡುಪಿ ಕೋರ್ಟ್‌ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ವಕೀಲರ ವಾಲಿಬಾಲ್‌ ಹಾಗೂ ತ್ರೋಬಾಲ್‌ ಟೂರ್ನ್‌ಮೆಂಟ್‌ಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ವಕೀಲರು ಶುಲ್ಕ ಪಡೆದುಕೊಳ್ಳುವುದು ಸೋಲು–ಗೆಲುವಿಗಾಗಿ ಅಲ್ಲ, ಕಕ್ಷಿದಾರನ ಪರವಾಗಿ ವಾದಮಂಡನೆ ಮಾಡಿದಗೋಸ್ಕರ. ವಕೀಲರು ಜನರಿಗೆ ಉತ್ತಮ ಕಾನೂನು ಸಲಹೆಗಳನ್ನು ನೀಡುವ ಕೆಲಸ ಮಾಡಬೇಕು ಎಂದರು.ಈ ವೇಳೆ ನ್ಯಾಯಾಧೀಶರು ತುಳು ಹಾಗೂ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿ ಸಭೀಕರ ಮೆಚ್ಚುಗೆಗೆ ಪಾತ್ರರಾದರು.


ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ ನ್ಯಾಯಾಧೀಶ ಅಶೋಕ್‌ ಜಿ. ನಿಜಗಣ್ಣನವರ್‌
ಮಾತನಾಡಿ, ಉಡುಪಿ ವಕೀಲರ ಸಂಘದ ಬೇಡಿಕೆಯಂತೆ ಜಿಲ್ಲೆಯಲ್ಲಿ ಶೀಘ್ರವೇ ಕೌಟುಂಬಿಕ ನ್ಯಾಯಾಲಯ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಹಾಗೆಯೇ ಉಡುಪಿ ನ್ಯಾಯಾಲಯದಲ್ಲಿ 2.80 ಕೋಟಿ ವೆಚ್ಚದ ಕಾಮಗಾರಿ ನಡೆಸಲು ಎರಡ್ಮೂರು ದಿನಗಳಲ್ಲಿ ಟೆಂಡರ್‌ ಅಂತಿಮಗೊಳಿಸಲಾಗುವುದು. ಇದಕ್ಕೆ ಜನಪ್ರತಿನಿಧಿಽಗಳು ಸಹಕಾರ ನೀಡಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೆಗೌಡ ಮಾತನಾಡಿ, ತನ್ನ ವಿಧಾನ ಪರಿಷತ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಕೊಡಗು ಜಿಲ್ಲೆಗಳ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿರುವ ವಕೀಲರ ಸಂಘದ ಗ್ರಂಥಾಲಯಕ್ಕೆ ತಲಾ ಎರಡು ಲಕ್ಷ ಮತ್ತು ತಾಲ್ಲೂಕು ವಕೀಲರ ಸಂಘದ ಗ್ರಂಥಾಲಯಕ್ಕೆ ತಲಾ ಒಂದು ಲಕ್ಷ ಅನುದಾನ ನೀಡಲಾಗುವುದು ಎಂದರು.

ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಸಿ.ಎಂ. ಜೋಶಿ ಮಾತನಾಡಿದರು. ಪೋಕ್ಸೋ ಕೋರ್ಟ್‌ ನ್ಯಾಯಾಧೀಶೆ ವನಮಾಲಾ ಆನಂದರಾವ್‌ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ. ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೊನಾಲ್ಡ್‌ ಪ್ರವೀಣ್‌ ಕುಮಾರ್‌ ವಂದಿಸಿದರು. ವಕೀಲೆ ಎ.ಆರ್‌. ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!