ಆದಿತ್ಯನನ್ನು 2 ವರ್ಷಗಳ ಹಿಂದೆಯೇ ಮನೆಯಿಂದ ಹೊರ ಹಾಕಿದ್ದೇವೆ: ಸಹೋದರ

ಮಂಗಳೂರು: ಬಜ್ಪೆ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟವ ನನ್ನ ಅಣ್ಣನೇ ಎಂದು ಆದಿತ್ಯ ರಾವ್ ತಮ್ಮ ಅಕ್ಷತ್ ಹೇಳಿದ್ದು, ಆದರೆ ಕಳೆದ ಬಾರಿ ಬಾಂಬ್ ಬೆದರಿಕೆ ಹಾಕಿದಾಗಲೇ ನಾವು ಆತನನ್ನು ಮನೆಯಿಂದ ಹೊರಗೆ ಬಿಟ್ಟಿದ್ದೇವೆ. ಮನೆಗೆ ಬರಬೇಡ ಎಂದು ತಂದೆ ಕೂಡ ಹೇಳಿದ್ದಾರೆ. ಇತ್ತೀಚೆಗೆ ಈ ರೀತಿ ಮಾಡುತ್ತಿದ್ದಾನೆ ಎಂದು ಆರೋಪಿ ಸಹೋದರ ಅಕ್ಷತ್ ರಾವ್ ಮಾಧ್ಯಮಗಳಿಗೆ ವಿವರಿಸಿದರು.

ಮಂಗಳೂರಿನ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಕರೆ ಮಾಡಿದಾಗ ಆದಿತ್ಯನಿಗೆ ಬುದ್ಧಿ ಮಾತು ಹೇಳಿದ್ದೇವೆ. ಮಾತು ಕೇಳದಿದ್ದಾಗ ಅವನನ್ನು ಮನೆಯಿಂದಲೇ ಹೊರಗೆ ಹಾಕಿದ್ದೇವೆ. ಇತ್ತೀಚೆಗೆ ಆತನ ನಮ್ಮ ಜೊತೆ ಅವನ ಸಂಪರ್ಕ ಇಲ್ಲ. ನಾವು ನಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಅವನ ಕೃತ್ಯಕ್ಕೆ ಜವಬ್ದಾರರಾಗಲು ನಮ್ಮಿಂದ ಆಗಲ್ಲ. ಎರಡು ವರ್ಷಗಳಿಂದ ಅವನ ಜೊತೆ ನಮಗೆ ಸಂಪರ್ಕ ಇಲ್ಲ. ಅವನ ಪಾಡಿಗೆ ಅವನನ್ನು ಬಿಟ್ಟಿದ್ದೇವೆ. ನಾವು ಇಬ್ಬರೇ ಮಕ್ಕಳು, ಮೂಲತಃ ಮಣಿಪಾಲದವರಾದ ನಾವು ಮಂಗಳೂರಿಗೆ ಬಂದು ೬ ತಿಂಗಳಾಯಿತು ಎಂದು ಹೇಳಿದರು.

ಚಿಕ್ಕಂದಿನಿಂದ ಸರಿಯಾಗಿಯೇ ಇದ್ದ, ನಂತರ ನಾನು ೮ನೇ ತರಗತಿಯಿಂದ ಹಾಸ್ಟೆಲಿಗೆ ಸೇರಿಕೊಂಡೆ. ಆತನೂ ಸಹ ಹಾಸ್ಟೆಲ್ ಸೇರಿದ, ನಂತರ ನಾವಿಬ್ಬರೂ ಒಟ್ಟಿಗೆ ಇದ್ದದ್ದು ಕಡಿಮೆ. ಕುಟುಂಬದವರೆಲ್ಲ ಸೇರಿದಾಗ ನಾವೂ ಸೇರುತ್ತಿದ್ದೆವು. ಆದಿತ್ಯ ಎಂಬಿಎ ಮತ್ತು ಬಿಇ ವಿದ್ಯಾಭ್ಯಾಸ ಮಾಡಿದ್ದಾನೆ. ಇತ್ತೀಚೆಗೆ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾನೆ. ಅವನನ್ನು ಸರಿ ಮಾಡಲು ತಂದೆ ಸಹ ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ.
೨೦೧೯ರ ಫೆಬ್ರವರಿಯಲ್ಲಿ ತಾಯಿ ತೀರಿಕೊಂಡಾಗ ಆದಿತ್ಯಗೆ ಕರೆ ಮಾಡಿದ್ದೆವು. ಆಗ ಆತ ಚಿಕ್ಕಬಳ್ಳಾಪುರದ ಜೈಲಿನಲ್ಲಿದ್ದ. ಹಿರಿಯ ಮಗನಾದ ಹಿನ್ನೆಲೆಯಲ್ಲಿ ಆತನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದೆವು. ಜೈಲಾಧಿಕಾರಿಗಳಿಗೆ ತಿಳಿಸಿ ಕಳುಹಿಸಲು ತಿಳಿಸಿದೆವು, ಆತ ಬರಲಿಲ್ಲ. ಹೀಗಾಗಿ ನಾನೇ ತಾಯಿಯ ಸಾವಿನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದೆ. ಅವನ ಕೃತ್ಯದ ಬಗ್ಗೆ ತಿಳಿಯುವ ಆಸಕ್ತಿ ನಮಗಿಲ್ಲ. ಈ ವಿಚಾರದಲ್ಲಿ ನಾವು ಅವನಿಗೆ ಬೆಂಬಲ ನೀಡಿಲ್ಲ, ಪೊಲೀಸರ ಎಲ್ಲ ತನಿಖೆಗೆ ಸಹಕರಿಸಿದ್ದೇವೆ. ಅಲ್ಲದೆ ಆತನಿಗೆ ಜಾಮೀನು ಪಡೆಯಲು ಸಹಾಯ ಮಾಡಿಲ್ಲ, ಮಾಡುವುದೂ ಇಲ್ಲ. ಅವನ ಬಗ್ಗೆ ನಮಗೂ ಭಯವಿದೆ. ಹೀಗಾಗಿ ನಮ್ಮ ಕುಟುಂಬಕ್ಕೆ ಭದ್ರತೆ ನೀಡುವಂತೆ ಪೊಲೀಸರಲ್ಲಿ ಕೇಳಿಕೊಂಡಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!