ಆದಿತ್ಯ ರಾವ್ ಮಾನಸಿಕ ಅಸ್ವಸ್ಥ: ಗೃಹ ಸಚಿವ ಬೊಮ್ಮಾಯಿ
ಬೆಳಗಾವಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಮಾನಸಿಕ ಅಸ್ವಸ್ಥನಾಗಿದ್ದಾನೆ. ಕೆಲಸ ಸಿಕ್ಕಿಲ್ಲ ಎನ್ನುವ ಮಾನಸಿಕಖಿನ್ನತೆಗೆ ಒಳಗಾಗಿ ಇಂತಹ ಕೃತ್ಯ ಮಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದಕ್ಕಿಂತ ಮುಂಚೆ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಹುಸಿ ಕರೆ ಮಾಡಿ ಶಿಕ್ಷೆ ಅನುಭವಿಸಿದ್ದಾನೆ, ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದರು. ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಪೈಪೋಟಿ ನಡೆಸಿದ್ದಾರೆ. ವಿರೋಧ ಪಕ್ಷಗಳ ನಾಯಕರು ಅತ್ಯಂತ ಬೇಜವಾಬ್ದಾರಿಯಿಂದ ಹೇಳಿಕೆ ನೀಡುತ್ತಿದ್ದಾರೆ ಎಂದರು. ಮಂಗಳೂರು ಪ್ರಕರಣದಲ್ಲಿ ರಾಜಕೀಯ ಮಾಡಲಾಗುತ್ತಿದೆ. ರಾಜಕೀಯ ಮಾಡುವ ಭರಾಟೆಯಲ್ಲಿ ದೇಶದ್ರೋಹಿ ಕೃತ್ಯಗಳಿಗೆ ಪ್ರಚೋದನೆ ಕೊಡಬಾರದು. ಕುಮಾರಸ್ವಾಮಿ ಅವರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹೇಳಿದರು. |