ಆದಿತ್ಯ ರಾವ್ ಓರ್ವನದ್ದೇ ಕೃತ್ಯವಲ್ಲ, ಪಿತೂರಿ ಇದೆ: ಖಾದರ್
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ಆದಿತ್ಯ ರಾವ್ ಏಕಾಂಗಿಯಾಗಿ ಬಾಂಬ್ ಇರಿಸಿಲ್ಲ, ಈ ಕೃತ್ಯದಲ್ಲಿ ತೊಡಗಿರುವ ಇತರರನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ಶಾಸಕ ಯು. ಟಿ. ಖಾದರ್ ಆಗ್ರಹ ಪಡಿಸಿದ್ದಾರೆ.
ನಗರದಲ್ಲಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಹಿಂದೆ ದೊಡ್ಡ ಪಿತೂರಿಯೇ ಇದೆ. ಈ ಘಟನೆ ಹಿಂದೆ ಕೇರಳದಿಂದ ಬಂದಿರುವ ಜನರು ಹಾಗೂ ಸಿಎಎ ವಿರೋಧಿಗಳ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಪ್ರಸ್ತುತ ಎಲ್ಲಾ ಧರ್ಮಗಳಲ್ಲಿಯೂ ಸಮಾಜ ವಿರೋಧಿಗಳಿದ್ದಾರೆ ಎಂಬುದನ್ನು ಆದಿತ್ಯ ರಾವ್ ಸಾಕ್ಷಿಕರಿಸಿದ್ದಾರೆ. ಅವರನ್ನು ಮಾನಸಿಕ ಅಸ್ವಸ್ಥ ಎಂಬಂತೆ ಬಿಂಬಿಸುವ ಯತ್ನ ನಡೆಯುತ್ತಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬಾಂಬ್ ಇಟ್ಟು, ನಂತರ ಬೆಂಗಳೂರಿನ ಡಿಜಿಪಿ ಕಚೇರಿಗೆ ಹೋಗಿ ಶರಣಾಗಿದ್ದಾರೆ. ಹೇಗೆ ಮಾನಸಿಕ ಅಸ್ವಸ್ಥರಾಗುತ್ತಾರೆ ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ಗುಪ್ತಚರ ದಳದ ವೈಫಲ್ಯತೆ ಎದ್ದು ಕಾಣುತ್ತದೆ. ಕುಮಾರಸ್ವಾಮಿ ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಪೊಲೀಸರಿಂದ ಪಡೆದ ಮಾಹಿತಿ ಆಧಾರದ ಮೇಲೆ ಅವರು ಆ ರೀತಿಯ ಹೇಳಿಕೆ ನೀಡಿದ್ದಾರೆ. ಸರ್ಕಾರ ಅದು ತಪ್ಪು ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.