ಆದಿತ್ಯ ರಾವ್ ಪ್ರಕರಣ: ಕಾರ್ಕಳ ಬಾರ್ ಮಾಲೀಕನ ವಿಚಾರಣೆ
ಕಾರ್ಕಳ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್‌ನನ್ನು ಹೆಚ್ಚಿನ ವಿಚಾರಣೆಗೆಂದು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಪೊಲೀಸರು ಶನಿವಾರ ಉಡುಪಿಗೆ ಕರೆತಂದು ಬಳಿಕ ಕಾರ್ಕಳದಲ್ಲಿ ಕೆಲಸ ಮಾಡಿದ್ದ ಕಿಂಗ್ಸ್ ಬಾರ್‌ಗೆ ಕರೆತಂದಿದ್ದಾರೆ. ಭಾರೀ ಬಿಗಿಭದ್ರತೆಯಲ್ಲಿ ತನಿಖಾಧಿಕಾರಿ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದ ಪೊಲೀಸರ ತಂಡ ಶನಿವಾರ ಸಂಜೆ 4 ಗಂಟೆಗೆ ಆರೋಪಿ ಆದಿತ್ಯ ರಾವ್‌ನನ್ನು ಅನಂತಶಯನದ ಕಿಂಗ್ಸ್ ಪ್ರಕರಣ ಆಂಡ್ ರೆಸ್ಟೋರೆಂಟ್‌ಗೆ ಕರೆದುಕೊಂಡು ಬಂದು ಆತನ ಉಳಿದುಕೊಂಡಿದ್ದ ವಿಶ್ರಾಂತಿ ಕೊಠಡಿಗೆ ಕರೆದೊಯ್ದು ಸ್ಥಳಮಹಜರು ನಡೆಸಿದರು. ಅಲ್ಲಿ ಆತ ಬಾಂಬ್ ಜೋಡಣೆಯ ಅಂತಿಮ ಸಿದ್ಧತೆ ಮಾಡಿಕೊಂಡಿಕೊಂಡಿರುವ ಒಂದಷ್ಟು ಮಾಹಿತಿಯನ್ನು ಪೊಲೀಸರಲ್ಲಿ ಹೇಳಿಕೊಂಡಿದ್ದ ಎನ್ನಲಾಗಿದ್ದು, ಸುಮಾರು ೧೦ ನಿಮಿಷಗಳ ಕಾಲ ಆತನ ವಿಶ್ರಾಂತಿ ಕೊಠಡಿಯೊಳಗೆ ಮಾಹಿತಿ ಸಂಗ್ರಹಿಸಿದರು.
ಬಳಿಕ ಬಾರ್ ಮಾಲೀಕ ಅಶೋಕ್ ಶೆಟ್ಟಿ ಹಾಗೂ ಮ್ಯಾನೇಜರ್‌ನಿಂದ ಪೊಲೀಸರು ಆದಿತ್ಯ ರಾವ್ ಕೆಲ ಮಾಡಿಕೊಂಡಿದ್ದ ಸಂದರ್ಭದಲ್ಲಿನ ಕೆಲ ಮಾಹಿತಿ ಪಡೆದುಕೊಂಡು ಆತ ವೇಟರ್ ಆಗಿ ಕೆಲಸ ನಿರ್ವಹಿಸಿದ್ದ ಕ್ಯಾಬಿನ್‌ಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ನಂತರ ಸಿಸಿ ಕ್ಯಾಮರಾದ ಡಿವಿಆರ್ ಹಾಗೂ ಇತರೇ ಮಹತ್ವದ ದಾಖಲೆ ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿನ ಬೇರೆ ವ್ಯಕ್ತಿಗಳ ಕೈವಾಡದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೆಳ್ಳಿಯಪ್ಪ ಈಗಾಗಲೇ ತನಿಖೆ ಪ್ರಾಥಮಿಕ ಹಂತದಲ್ಲಿದೆ ಈ ಬಗ್ಗೆ ಹೆಚ್ಚೇನು ವಿವರ ನೀಡಲು ಸಾಧ್ಯವಿಲ್ಲವೆಂದರು.