ಆನ್ ಲೈನ್ ವಂಚನೆ ತಡೆಯಲು ಹೆಚ್ಚುವರಿ ಸೆನ್ ಠಾಣೆ: ಗೃಹ ಸಚಿವ ಬೊಮ್ಮಾಯಿ
ಉಡುಪಿ: ಮುಂದಿನ ವರ್ಷ ಕನ್ನಡ ರಾಜ್ಯೋತ್ಸವದೊಂದು ಎರಡೂ ಬಾವುಟ ಹಾರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವ ಸಂದರ್ಭ ಕನ್ನಡ ಧ್ವಜ ಹಾರಿಸದೇ ಇರುವ ವಿಚಾರದಲ್ಲಿ ರಾಜ್ಯ ಸಂಪುಟ ಸದಸ್ಯರೆ ಗೊಂದಲದಲ್ಲಿದ್ದಾರೆ. ಒಬ್ಬೊಬ್ಬರು ಒಂದೊಂದು ಹೇಳಿಕೆಯನ್ನು ನೀಡಿದ್ದಾರೆ. ಉಡುಪಿಯಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ಧ್ವಜವನ್ನು ಹಾರಿಸಿಲ್ಲ. ಆದರೆ ಕನ್ನಡ ಧ್ವಜವನ್ನು ಹಾರಿಸಬಾರದು ಎಂದು ರಾಜ್ಯ ಸರಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಯಾವುದೇ ಸುತ್ತೋಲೆ ಸ್ವೀಕರಿಸಿಲ್ಲ ಎಂದು ಉಡುಪಿ ರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ಧಿಗಾರರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಇವತ್ತೇ ಸೂಚಸಿದ್ದು , ಮುಂದಿನ ವರ್ಷದಿಂದ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸುತ್ತೇವೆ ಎಂದು ಹೇಳಿದರು. ಇದರ ಬಗ್ಗೆ ದಿನೇಶ್ ಗುಂಡೂರಾವ್ ಟ್ವೀಟ್‌ಗೆ ನಾನು ಉತ್ತರಿಸಲ್ಲ ಎಂದ ಇವರು ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲಿ ರಾಜಕೀಯ ಬೆರೆಸಿಲ್ಲ, ರಾಜಕಾರಣಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿಲ್ಲ. ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡ
ಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಡಿಜಿಟಲೈಸೇಶನ್ ಹೆಚ್ಚಾಗಿರುವುದರಿಂದ ಹಣಕಾಸು ವಿನಿಮಯಗಳೆಲ್ಲಾ ಆನ್ ಲೈನ್ ಮುಖಾಂತರ ನಡೆಯುತ್ತಿದೆ. ಹೀಗಾಗಿ ಸೈಬರ್ ಕ್ರೈಂ ಹೆಚ್ಚಾಗಿದೆ. ಅದರಲ್ಲೂ ಕರ್ನಾಟಕ ಐಟಿಯಲ್ಲಿ ಬಹಳ ಮುಂದೆ ಇಸ್ರೋದಿಂದ ಇಲ್ಲಿನ
ಡಿಜಿಟಲೈಸೇಶನ್ ಮಿಸ್ ಯೂಸ್ ಆಗುತ್ತಿದೆ. ಈ ಬಗ್ಗೆ ನಿಗಾ ವಹಿಸಲು ರಾಜ್ಯದಲ್ಲಿ ಸೆನ್ ಪೊಲೀಸ್ ಠಾಣೆ ಸಂಖ್ಯೆ ಹೆಚ್ಚು ಮಾಡುತ್ತೇವೆ. ಬೆಂಗಳೂರು ನಗರ ಸೇರಿದಂತೆ, ಕಮಿಷನರೇಟ್ ವ್ಯಾಪ್ತಿಯಲ್ಲಿ ಠಾಣೆಗಳ ಸಂಖ್ಯೆ ಹೆಚ್ಚು ಮಾಡಲಾಗುವುದು ಎಂದರು. ಬಾಂಗ್ಲಾ ವಲಸಿಗರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಗೃಹ ಇಲಾಖೆಯಿಂದ ಸೂಚನೆ ಬಂದಿದೆ ಎಂದು ಬೊಮ್ಮಾಯಿ ಹೇಳಿದರು.
ಟಿಪ್ಪು ಕುರಿತ ಪಠ್ಯವನ್ನು ಕೈ ಬಿಡುವ ವಿಚಾರವಾಗಿ ಕ್ಯಾಬಿನೆಟ್ ಸಭೆಯಲ್ಲಿ ಇನ್ನೂ ಚರ್ಚೆಯಾಗಿಲ್ಲ. ಟಿಪ್ಪು ವಿಚಾರಗಳು ಹಿಂದೆ ಪ್ರಚಲಿತದಲ್ಲಿ ಇರಲಿಲ್ಲ. ವಿವಾದಾದ್ಮಕ ವಿಚಾರ ಮಕ್ಕಳಿಗೆ ತಿಳಿಸಬಾರದು ಅನ್ನೋದು ಸರ್ಕಾರದ ಉದ್ದೇಶ. ಶಾಲಾ ಪಠ್ಯದಿಂದ ಪಾಠ ರದ್ಧತಿ ಬಗ್ಗೆ ಸಿಎಂ ಪರಿಶೀಲನೆ ಮಾಡಬೇಕೆಂದು ಹೇಳಿದ್ದಾರೆ. ಸರ್ಕಾರ ಇಲ್ಲಿಯವರೆಗೆ ಯಾವುದೇ ನಿರ್ಣಯ ಮಾಡಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.