ಅದಮಾರು ಮಠದ ಪರ್ಯಾಯ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಬುಧವಾರ ಕೃಷ್ಣ ಮಠದ ರಾಜಾಂಗಣದಲ್ಲಿ ಬಿಡುಗಡೆಗೊಳಿಸಿದರು. ಪರ್ಯಾಯ ಮಹೋತ್ಸವ ಜ.18ರಂದು ನಡೆಯಲಿದ್ದು, ಪರ್ಯಾಯ ಪ್ಲಾಸ್ಟಿಕ್ ಮುಕ್ತವಾಗಿರಲಿದೆ. ಇದಕ್ಕೆ ಈಗ ಬಿಡುಗಡೆಗೊಂಡಿರುವ ಆಮಂತ್ರಣ ಪತ್ರಿಕೆಯೇ ಸಾಕ್ಷಿ. ಇಡೀ ಪರ್ಯಾಯವೇ ಹೊಸತನದಿಂದ ಕೂಡಿರಲಿದೆ ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ಜ. 18ರ ಬೆಳಗ್ಗೆ 1.20ಕ್ಕೆ ಕಾಪು ದಂಡತೀರ್ಥದಲ್ಲಿ ಪರ್ಯಾಯ ಶ್ರೀಗಳಿಂದ ಪವಿತ್ರ ಸ್ನಾನ, 1.50ಕ್ಕೆ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರ ಪೂಜೆ, ಮೆರವಣಿಗೆ ಆರಂಭ. 4.50ಕ್ಕೆ ಕನಕನಕಿಂಡಿಯಲ್ಲಿ ಶ್ರೀಕೃಷ್ಣ ದೇವರ ದರ್ಶನ, ಚಂದ್ರಮೌಳೀಶ್ವರ, ಅನಂತೇಶ್ವರ ದೇವರ ದರ್ಶನ, 5.30ಕ್ಕೆ ಕೃಷ್ಣಮಠ ಪ್ರವೇಶ, 5.57ಕ್ಕೆ ಅಕ್ಷಯಪಾತ್ರೆ ಸ್ವೀಕಾರ ಮತ್ತು ಸರ್ವಜ್ಞಪೀಠಾರೋಹಣ, ಬೆಳಗ್ಗೆ 10ಕ್ಕೆ ಮಹಾಪೂಜೆ, 10.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು.