ಖ್ಯಾತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಜಾಮೀನು ರಹಿತ ವಾರೆಂಟ್ ಜಾರಿ
ಬೆಂಗಳೂರು: ಕಿರಿಕ್ ಪಾರ್ಟಿಯಲ್ಲಿ ಅನುಮತಿ ಇಲ್ಲದೇ ಹಾಡು ಬಳಸಿದಕ್ಕಾಗಿ ಖ್ಯಾತ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಅನುಮತಿಯಿಲ್ಲದೆ ಶಾಂತಿಕ್ರಾಂತಿಯ ಮಧ್ಯ ರಾತ್ರಿಯಲ್ಲಿ ಹಾಡನ್ನ ಚಿತ್ರದಲ್ಲಿ ಬಳಸಿಕೊಂಡಿದ್ದರಿಂದ ಕಾಪಿ ರೈಟ್ ಆಕ್ಟ್ ಅಡಿ ಲಹರಿ ಸಂಸ್ಥೆ ಜನವರಿ 11 2017ರಂದು ದೂರು ದಾಖಲಿಸಿತ್ತು. ಕಾಪಿ ರೈಟ್ ಆಕ್ಟ್ ಉಲ್ಲಂಘಿಸಿದಕ್ಕಾಗಿ ಇಬ್ಬರಿಗೆ 9ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಮಾಡಿದೆ. ಪ್ರಕರಣದ ವಿಚಾರಣೆಗೆ ಪದೇ-ಪದೇ ಗೈರಾದ ಕಾರಣ 9ನೇ ಎಸಿಎಂಎಂ ನ್ಯಾಯಾಲಯವು ರಕ್ಷಿತ್ ಶೆಟ್ಟಿ ಹಾಗೂ ಅಜನೀಶ್ ಲೋಕನಾಥ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಇದರಿಂದಾಗಿ ಇಬ್ಬರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದಿದ್ದಲ್ಲಿ ಪೊಲೀಸರು ಅವರನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಲಿದ್ದಾರೆ. ಶಾಂತಿಕ್ರಾಂತಿ ಸಿನಿಮಾದ ‘ಮಧ್ಯ ರಾತ್ರಿಲಿ, ಹೈವೇ ರಸ್ತೆಲಿ’ ಹಾಡಿನ ಸಂಗೀತವನ್ನು ಕದ್ದು ಕಿರಿಕ್ ಪಾರ್ಟಿ ಚಿತ್ರದ ಜನಪ್ರಿಯ ಹಾಡು ‘ಹೂ ಆರ್ ಯು’ ನಲ್ಲಿ ಬಳಸಲಾಗಿದೆ ಎಂಬ ಆರೋಪಿಸಲಾಗಿದೆ. ಆದರೆ ‘ಮಧ್ಯ ರಾತ್ರಿಲಿ, ಹೈವೇ ರಸ್ತೆಲಿ’ ಹಾಡು ಲಹರಿ ಆಡಿಯೋ ಒಡೆತನಕ್ಕೆ ಸೇರಿದೆ. |