ಸೆಕ್ಷನ್ 144: ಜಾತ್ರೆ, ಯಕ್ಷಗಾನ,ಸಂತೆ,ಧಾರ್ಮಿಕ ಕಾರ್ಯಕ್ರಮ ನಡೆದರೆ ಕ್ರಮ: ಎಚ್ಚರಿಕೆ
ಉಡುಪಿ: ಮಾರ್ಚ್ 18ರಿಂದ ಜಿಲ್ಲೆಯಾದ್ಯಂತ ಜಾರಿಗೊಳಿಸಿರುವ ಸೆಕ್ಷನ್ 144(3)ರನ್ವಯ ನಿಷೇಧಾಜ್ಞೆಯ ಅನ್ವಯ ಐದಕ್ಕಿಂತ ಹೆಚ್ಚು ಜನ ಸೇರುವ ಯಾವುದೇ ಸಭೆ ಸಮಾರಂಭ, ಸಂತೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಹರಕೆಯ ಆಟವಾಗಲಿ, ಯಕ್ಷಗಾನ ಬಯಲಾಟಗಳಾಗಲಿ ನಡೆಸಿದರೆ ಅಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುರ್ತು ಅಲ್ಲದ ಕೆಲಸಗಳನ್ನು ಆಯಾ ಸರ್ಕಾರಿ ಕಚೇರಿಗೆ ಕರೆ ಮಾಡಬಹುದು, ಅಥವಾ ಅಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಹೇಳಬಹುದು, ಅಧಿಕಾರಿಗಳು ಅವುಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದರು. ಆದರೇ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಕಚೇರಿಗೆ ಬರಬೇಕು, ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಸಹಕರಿಸಬೇಕು ಎಂದವರು ಹೇಳಿದರು. ಜಲಜಂಗುಳಿ ಹೆಚ್ಚಾಗಿರುವಲ್ಲಿ ಕೊರೊನಾ ಹರಡುವ ಭೀತಿ ಇರುವುದರಿಂದ, ಸಾರ್ವಜನಿಕರು ತುರ್ತು, ಅನಿವಾರ್ಯ ಕೆಲಸ ಕಾರ್ಯಗಳಿದ್ದರೇ ಮಾತ್ರ ಸರ್ಕಾರಿ ಕಚೇರಿಗಳಿಗೆ ಬರಬೇಕು, ಇಲ್ಲದಿದ್ದಲ್ಲಿ ಬರಬೇಡಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ
ಆಸ್ಪತ್ರೆಗೆ ಹೋಗಬೇಡಿ: ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೂ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಭೇಟಿ ನೀಡಿ, ಸಾಮಾನ್ಯ ಆರೋಗ್ಯ ತಪಾಸಣೆಯಂತಹ ಸಂದರ್ಭದಗಳನ್ನು ಮುಂದೂಡಿ ಎಂದವರು . ಸಂತೆಗೆ ಹೋಗಬೇಡಿ ಮನೆಗೆ ತಿಂಗಳಿಗಾಗುವಷ್ಟು ನಿತ್ಯಬಳಕೆಯ ವಸ್ತುಗಳನ್ನು ಖರೀದಿಸಿಟ್ಟುಕೊಳ್ಳಿ, ಸಾಮಾನು ತರುವುದಕ್ಕೆ ತುಂಬಾ ಜನರಿರುವ ಸಂತೆಗೆ ಹೋಗಬೇಡಿ, ಮನೆ ಸಮೀಪದ ಅಂಗಡಿಗಳಿಂದಲೇ ಖರೀದಿಸಿ ಎಂದು ಡಿಸಿ ಹೇಳಿದರು.
ಬಸ್ಸುಗಳಲ್ಲಿ ಬರಬೇಡಿ: ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿದ್ದವರು ತಕ್ಷಣ ಆಸ್ಪತ್ರೆಗೆ ದಾಖಲಾಗಿದೆ, ಯಾವುದೇ ಕಾರಣಕ್ಕೂ ಬಸ್ಸು ಅಥವಾ ಸಾರ್ವನಿಜಕ ವಾಹನಗಳ ಮೂಲಕ ಆಸ್ಪತ್ರೆಗೆ ಹೋಗಬೇಡಿ, ಜಿಲ್ಲಾಸ್ಪತ್ರೆಗೆ (9663957222 ಅಥವಾ 9663950222) ಕರೆ ಮಾಡಿದರೇ 24 ಗಂಟೆಯೂ ಅದಕ್ಕೆಂದೇ ಆ್ಯಂಬ್ಯುಲೆನ್ಸ್ ಇದೆ, ಅದನ್ನು ಕಳಹಿಸಲಾಗುವುದು ಎಂದರು.
ದೇವಳಕ್ಕೆ ಹೋಗಬೇಡಿ
ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ 144 ಸೆಕ್ಷನ್ ನಿಷೇದಾಜ್ಞೆ ಕಡ್ಡಾಯವಾಗಿ ಅನ್ವಯ ಆಗುತ್ತದೆ, ಯಾರಿಗೂ ಪ್ರತ್ಯೇಕವಾದ ನೊಟೀಸು ನೀಡುವುದಿಲ್ಲ. ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ದೇವಾಲಯಗಳು ಕೂಡ ಪ್ರವಾಸಿ ತಾಣಗಳೇ ಆಗಿರುತ್ತವೆ. ಆದ್ದರಿಂದ ಅಲ್ಲಿಯೂ ಪ್ರವಾಸಿಗರನ್ನು ನಿರ್ಬಂಧಿಸಬೇಕು ಎಂದರು.
ಆಟಗಳನ್ನು ಆಡಬೇಡಿ
ಕೆಲವು ಯಕ್ಷಗಾನ ಮೇಳಗಳು ಹರಕೆಯ ಆಟ ಆಡುವುದನ್ನು ನಿಲ್ಲಿಸಿಲ್ಲ, ಯಾರೂ ಕೂಡ ಸಾರ್ವಜನಿಕರ ಆರೋಗ್ಯದ ಜೊತೆ ಆಟ ಆಡುವುದಕ್ಕೆ ಬಿಡುವುದಿಲ್ಲ, ಅಂತಹವರ ಮೇಲೆ ಕೇಸು ಬುಕ್ ಮಾಡಿ ಎಂದು ಡಿಸಿ ಅವರು ಎಸ್ಪಿಗೆ ಸೂಚಿಸಿದರು.
ಸುದ್ದಿಗೋಷ್ಠಿಯಲ್ಲಿ ಎಡಿಸಿ ಸದಾಶಿವ ಪ್ರಭು, ಜಿಪಂ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಡಿಎಚ್ಓ ಡಾ.ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂಧನ ನಾಯಕ್ ಉಪಸ್ಥಿತರಿದ್ದರು.
144 ಎಲ್ಲಾ ಧರ್ಮ ದವರಿಗು ಅನ್ವಯಿಸುತ್ತದೆ ಯೇ ಜ ಜಗದೀಶ್ ಸರ್