ಮುಖ್ಯಮಂತ್ರಿಗಳು , ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳಬೇಕು: ಸಿಪಿಐಎಂ
ಉಡುಪಿ: ಅನೇಕ ದಿನಗಳಿಂದ ಕಾಣೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಹಠಾತ್ತಾಗಿ ಉಡುಪಿ ಜಿಲ್ಲೆಗೆ ಬಂದು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೊರೋನಾ ಸೋಂಕಿನಿಂದ ಕೆಲಸ ಇಲ್ಲದೆ ಬಳಲಿದ ವಲಸೆ ಕಾರ್ಮಿಕರು, ಬೀಡಿ ಕಾರ್ಮಿಕರು, ಬಸ್ಸು, ರಿಕ್ಷಾ ಸೇರಿದಂತೆ ಸಾರಿಗೆ ಮತ್ತು ಇತರೆ ಅಸಂಘಟಿ ಕಾರ್ಮಿಕರಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ಕೋಮು ಭಾವನೆಯನ್ನು ಪ್ರಚೋದಿಸುತಿರುವುದು ಉಡುಪಿ ಜಿಲ್ಲೆಯ ದುರದೃಷ್ಟ. ಶೋಭಾ ಕರಂದ್ಲಾಜೆ ಅವರು ಮಾರ್ಚ್ 31ರಂದು ಬಿಜೆಪಿ ಸಂಸದ ಸುಬ್ರಮಣ್ಯನ್ ಸ್ವಾಮಿ ಮಾಡಿರುವ ಟ್ವೀಟ್ ನ್ನು ದಯವಿಟ್ಟು ಓದಬೇಕು.’ ವಿದೇಶಿಯರು ಭಾರತಕ್ಕೆ ಬರುವುದನ್ನು ಫೆಬ್ರುವರಿ 1 ನೇ ಸುಮಾರಿಗೆ ನಿಷೇಧ ಮಾಡಿದ್ದ ರೆ, ಮತ್ತು ವಿದೇಶದಿಂದ ಮರಳುವ ಭಾರತೀಯರಿಗೆ ವಿಮಾನ ನಿಲ್ದಾಣದ ಸಮೀಪ 14 ದಿನಗಳ ಕ್ವಾರಂಟೈನ್ ಮಾಡಿದ್ದರೆ ತಬ್ಲಿಗಿ ಸಮಸ್ಯೆ ಉದ್ಭವ ಆಗುತ್ತಿರಲಿಲ್ಲ. ಆ ನಿಷೇಧ ಹಾಕಲು ನಿಧಾನ ಆದದ್ದು ಯಾಕೆ ‘ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಪಕ್ಷದವರೇ ಕೇಂದ್ರ ಸರಕಾರದ ದೋಷವನ್ನು ಬೊಟ್ಟು ಮಾಡಿ ತೋರಿಸುತ್ತಿರುವ ಸಂದರ್ಭದಲ್ಲಿ ನೀವು ಕೋಮು ಭಾವನೆ ಕೆರಳಿಸುವ ಕೆಟ್ಟ ಕೆಲಸದಲ್ಲಿ ತೊಡಗಿದ್ದಿರಿ ಇಡೀ ದೇಶ ಕೊರೋನಾ ಬಾಧೆಯಿಂದ ತತ್ಠರಿಸುವಾಗ ಕರಾವಳಿ ಜಿಲ್ಲೆಗಳ ಎರಡು ರಸ್ತೆ ನಿರ್ಮಾಣ ಕಂಪೆನಿಗಳು 6 ಟೋಲ್ ಗೇಟ್ ಗಳಲ್ಲಿ ಶುಲ್ಕ ದರ ಹೆಚ್ಚಿಸಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈಗ ರಸ್ತೆಯಲ್ಲಿ ಹೆಚ್ಚಾಗಿ ಚಲಿಸುತಿರುವುದು ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಮಾತ್ರ. ಈ ಸಂದರ್ಭದಲ್ಲಿ ಶುಲ್ಕ ಹೆಚ್ಚಿಸುವುದು ಅಪರಾಧ. ಕೋಮು ಭಾವನೆಯನ್ನು ಕೆರಳಿಸುವ ಬದಲು ಅಂತಹ ಸಮಸ್ಯೆಗಳ ಬಗ್ಗೆ ಗಮನ ನೀಡಿ ಎಂದು ಒತ್ತಾಯ ಪೂರ್ವಕವಾಗಿ ಕೇಳುತ್ತಿದ್ದೇವೆ. ಯಾವುದೋ ಘಟನೆಯನ್ನು ಮುಂದಿಟ್ಟು ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ ಕೈಗೊಳ್ಳುವುದಾಗಿ ಮಾನ್ಯ ಮುಖ್ಯ ಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ. ಮೊದಲು ಶೋಭಾ ಕರಂದ್ಲಾಜೆ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. |