ಚಿಕಿತ್ಸಾ ಪದ್ದತಿ ಬದಲಿಸುವ ವೈದ್ಯರ ವಿರುದ್ದ ಕ್ರಮ : ಜಿಲ್ಲಾಧಿಕಾರಿ
ಉಡುಪಿ: ಸಾರ್ವಜನಿಕರಿಗೆ ಆರೋಗ್ಯ ಚಿಕಿತ್ಸೆ ನೀಡಲು ಅನುಮತಿ ಪಡೆದಿರುವ ಚಿಕಿತ್ಸಾ ವಿಧಾನದ ಬದಲು, ಇತರೆ ವಿಧಾನದ ಮೂಲಕ ಚಿಕಿತ್ಸೆ ನೀಡುವ ವೈದ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಾ ಪ್ರಾಧಿಕಾರದ ಆಸ್ಪತ್ರೆಗಳ ನೊಂದಣಿ ಮತ್ತು ಕುಂದು ಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಆಯುರ್ವೇದ ವಿಧಾನದಲ್ಲಿ ಚಿಕಿತ್ಸೆ ನೀಡಲು ಅನುಮತಿ
ಪಡೆದಿರುವ ವೈದ್ಯರು , ತಮ್ಮಲ್ಲಿ ಬರುವ ರೋಗಿಗಳಿಗೆ ಆಲೋಪತಿ
ಪದ್ದತಿಯಲ್ಲಿ ಬಳಸುವ ಮಾತ್ರೆಗಳನ್ನು ವಿತರಿಸಿ ಚಿಕಿತ್ಸೆ ನೀಡುತ್ತಿರುವ ಕುರಿತು
ಗಮನಕ್ಕೆ ಬಂದಿದ್ದು, ಇಂತಹ ವೈದ್ಯರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ
ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಆಯುರ್ವೇದ ವಿಧಾನದಲ್ಲಿ ಚಿಕಿತ್ಸೆ ನೀಡುವ ಸಂಸ್ಥೆಗಳಿಗೆ ದಿಡೀರ್ ಭೇಟಿ
ನೀಡಿ, ಅಲ್ಲಿ ರೋಗಿಗಳಿಗೆ ನೀಡುವ ಚಿಕಿತ್ಸಾ ವಿಧಾನ ಮತ್ತು ನೀಡಲಾಗುವ
ಮಾತ್ರೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಅವುಗಳನ್ನು ಪರೀಕ್ಷಿಸಿ , ತಪ್ಪು
ಕಂಡುಬಂದಲ್ಲಿ ಅಂತಹ ವೈದ್ಯರ ವಿರುದ್ದ ಕಾಯಿದೆ ಉಲ್ಲಂಘನೆಗೆ
ನಿಗಧಿಪಡಿಸಿರುವ ಶಿಕ್ಷೆಗೆ ಒಳಪಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ
ಡಿಸಿ ಸೂಚನೆ ನೀಡಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ
ಡಾ. ಸೆಲ್ವರಾಜ್, ಡಿಹೆಚ್‍ಓ ಡಾ. ಅಶೋಕ್, ಜಿಲ್ಲಾ ಸರ್ಜನ್ ಡಾ.
ಮುಧುಸೂಧನ್ ನಾಯಕ್,ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಲಕಾನಂದ
ರಾವ್ ಹಾಗೂ ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು
ಉಪಸ್ಥಿತರಿದ್ದರು.