ಆರ್‌ಟಿಓ ಕಛೇರಿಗೆ ಎಸಿಬಿ ದಾಳಿ:15 ಬ್ರೋಕರ್ ಗಳ ವಶಕ್ಕೆ
ದಾವಣಗೆರೆ: ದಾವಣಗೆರೆ ಆರ್‌ಟಿಓ ಕಛೇರಿ ಮೇಲೆ ಎಸಿಬಿ ದಿಡೀರ್ ದಾಳಿ ನಡೆಸಿದ್ದು ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದ ಹದಿನೈದು ಮಧ್ಯವರ್ತಿಗಳ ವಶಕ್ಕೆ .
ಮಂಗಳವಾರ ಎಸಿಬಿ ಅಧಿಕಾರಿಗಳು ಆರ್‌ಟಿಓ ಕಚೇರಿ ಮೇಲೆ ದಾಳಿ ನಡೆಸಿ ಸಾರ್ವಜನಿಕರಿಗೆ ಡಿಎಲ್, ಎಲ್‍ಎಲ್‍ಆರ್ ಮಾಡಿಸಲು ದುಪ್ಪಟ್ಟು ಹಣ ಪಡೆಯುತ್ತಿದ್ದ, ಬೇರೆ ಬೇರೆ ಕೆಲಸಗಳಿಗೆ ಲಂಚ ಸ್ವೀಕರಿಸುತ್ತಿದ್ದ ಮಧ್ಯವರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.ಇದೇ ವೇಳೆ ಅವರ ಬಳಿ ಇದ್ದ ಅಪಾರ ದಾಖಲೆ ಪತ್ರಗಳು ಹಾಗೂ ಲಕ್ಷಾಂತರ ರು. ಹಣವನ್ನು ಸಹ ಅವರು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ನೂನವಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆ ದಂಡದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಸರಿಯಾದ ದಾಖಲೆ ಪತ್ರ ಪಡೆದುಕೊಳ್ಳುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿಓ ಗೆ ಆಗಮಿಸುತ್ತಿದ್ದಾರೆ.ಇದನ್ನೇ ಬಂಡವಾಳವಾಗಿಸಿಕೊಂಡ ಮಧ್ಯವರ್ತಿಗಳು ಅವರಿಂದ ನಿಗದಿಗಿಂತ ದುಪ್ಪಟ್ಟು ಹಣ ವಸೂಲಿ ನಡೆಸಿದ್ದಾರೆ. ಇದರಿಂದ ನೊಂದ ಸಾರ್ವಜನಿಕರು ಎಸಿಬಿಗೆ ದೂರಿತ್ತಿದ್ದು ದೂರಿನನ್ವಯ ಇಂದು ದಾಳಿ ನಡೆದಿದೆ.
ದಾಳಿಯ ವೇಳೆ 1,76,800 ರು. ಹಣವನ್ನು ವಶಕ್ಕೆ ಪಡೆಯಲಾಗಿದೆ.ಮಧ್ಯವರ್ತಿಗಳ ವಿರುದ್ಧ ಪಿಸಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಸಿಬಿ ಡಿವೈಎಸ್‍ಪಿ ಪರಮೇಶ್ವರಪ್ಪ ನೇತೃತ್ವದ ತಂಡ ಈ ದಾಳಿ ನಡೆಸಿತ್ತು.
ಇದಕ್ಕೆ ಮುನ್ನ ಸೆಪ್ಟಂಬರ್ 13 ರಂದು ಬೆಂಗಳೂರು ಜಯನಗರದ ಆರ್‌ಟಿಓ ಕಚೇರಿ ಮೇಲೆ ಸಹ ಎಸಿಬಿ ದಾಳಿ ನಡೆದಿದ್ದು ಆ ವೇಳೆ ಇಬ್ಬರು ಮಧ್ಯವರ್ತಿಗಳನ್ನು ವಶಕ್ಕೆ ಪಡೆದುಕೊಳ್ಲಲಾಗಿತ್ತು.