ವಾಹನದಡಿ ನಾಗರಹಾವು ಬಿದ್ದು ಟ್ರಾಫಿಕ್ ಜಾಮ್
ಬಂಟ್ವಾಳ: ರಸ್ತೆ ದಾಟುತ್ತಿದ್ದ ನಾಗರ ಹಾವೊಂದು ಆಕಸ್ಮಿಕವಾಗಿ ವಾಹವೊಂದರ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬಿ.ಸಿ.ರೋಡಿನ ರೈಲ್ವೆಮೇಲ್ಸೆತುವೆಯಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ ನಡೆದ ಪರಿಣಾಮ ಕೆಲಹೊತ್ತುಗಳ ಕಾಲ ವಾಹನ ಸಂಚಾರದಲ್ಲಿ ಆಡಚಣೆ ಉಂಟಾಯಿತು.
ರಸ್ತೆಯ ಮಧ್ಯೆದಲ್ಲಿ ನಾಗರ ಹಾವು ಸಾವನ್ನಪ್ಪಿದರಿಂದ ಹಾವನ್ನು ಸ್ಥಳದಿಂದ ತೆರವು ಗೊಳಿಸುವ ಮುನ್ನ ವೈದಿಕ ವಿಧಿವಿಧಾನಗಳು ನಡೆಯಬೇಕಾಗಿದ ಹಿನ್ನಲೆಯಲ್ಲಿ ಕೆಲಹೊತ್ತುಗಳ ಕಾಲ ಬಿ.ಸಿ.ರೋಡ್ ಪರಿಸರದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.ಇಲ್ಲಿನ ರಿಕ್ಷಾ ಚಾಲಕರು ಹಾವಿನ ಅಂತ್ಯ ಸಂಸ್ಕಾರದ ಹೊಣೆಯನ್ನು ಹೊತ್ತು ಮಾನವೀಯತೆ ತೋರಿದರು.ನಾಗರಹಾವಿನ ಅಂತ್ಯ ಸಂಸ್ಕಾರದ ಖರ್ಚಿಗಾಗಿ ವಾಹನ ಚಾಲಕರು, ಸಾರ್ವಜನಿಕರು ದೇಣಿಗೆ ನೀಡಿದರು.
ಬಂಟ್ವಾಳದ ಪುರೋಹಿತರೊಬ್ಬರು ಸ್ಥಳಕ್ಕಾಗಮಿಸಿ ಹಾವಿನ ಅಂತ್ಯಕ್ರಿಯೆಯ ವೈದಿಕ ಕಾರ್ಯಗಳನ್ನು ಪೂರೈಸಿದ ಬಳಿಕ ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಹಾವನ್ನು ಸ್ಥಳದಿಂದ ತೆರವುಗೊಳಿಸಿ ಅಂತ್ಯಕ್ರಿಯೆಗೆ ಕೊಂಡೊಯ್ಯಲಾಯಿತು.
ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳದಲ್ಲಿದ್ದು, ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.