ಕೃಷಿ ಕಾರ್ಯಕ್ಕೆ ಗದ್ದೆಗೆ ಇಳಿದ ಐಸಿವೈಎಂ ಯುವಜನರ ತಂಡ
ಉಡುಪಿ : ಭಾರತೀಯ ಕಥೋಲಿಕ್ ಸಂಚಲನ (ಐಸಿವೈಎಂ) ಉಡುಪಿ ಧರ್ಮ ಪ್ರಾಂತ್ಯದ ಆದೇಶದಂತೆ, ಆಧುನಿಕ ಕಾಲದಲ್ಲಿ ಕೃಷಿಯಿಂದ ದೂರ ಸರಿದಿರುವ ಯುವಜನರು, ಅದರ ಬಗ್ಗೆ ಮಾಹಿತಿ ಮತ್ತು ಬೇಸಾಯ ಮಾಡಬೇಕು ಎಂಬ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಯಾವರ ಐಸಿವೈಎಂ ಘಟಕದ ಸದಸ್ಯರು ಉತ್ಸಾಹದಿಂದ ನಡೆಸಿದರು.
ಐವತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಐಸಿವೈಎಂ ಉದ್ಯಾವರ ಘಟಕದ ಸದಸ್ಯರು, ತಮ್ಮ ಎಲ್ಲ ಕಾರ್ಯ ಚಟುವಟಿಕೆಗಳಿಂದ ಒಂದಿಷ್ಟು ಹೊತ್ತು ಬ್ರೇಕ್ ನೀಡಿ, ಗದ್ದೆಗೆ ಇಳಿಯುವುದರ ಮೂಲಕ ಯುವಜನರಿಗೆ ಆದರ್ಶರಾದರು. ಉದ್ಯಾವರ ಕುತ್ಪಾಡಿ ಪರಿಸರದ ಹಿರಿಯ ಕೃಷಿಕ ಕುಟುಂಬವಾದ ದಾಂತಿ ಕುಟುಂಬದ ಅರ್ಧ ಎಕರೆ ಗದ್ದೆಯಲ್ಲಿ ನಾಟಿಯನ್ನು (ನೇಜಿ ) ಸ್ವತಃ ನೆಡುವುದರ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು.
ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ಚರ್ಚ್ ವ್ಯಾಪ್ತಿಯ ಐಸಿವೈಎಂ ಯುವಜನರ ತಂಡವು ಸದಾ ವಿವಿಧ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಈ ಪರಿಸರದಲ್ಲಿ ಜನ ಮನ್ನಣೆ ಗಳಿಸಿದೆ. ೫೦ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಈ ಸಂಸ್ಥೆಯು, ವಿಶಿಷ್ಟ ಕಾರ್ಯಕ್ರಮ ನಡೆಸುವುದರ ಮೂಲಕ ಯುವಜನರು ಕೃಷಿ ಬೇಸಾಯದಿಂದ ದೂರ ಸರಿದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ಹಿರಿಯ ಕೃಷಿಕರಾದ ಜೂಲಿಯನ್ ದಾಂತಿ ಅವರು ನಾಟಿ, ನೇಜಿ ನೀಡುವುದರ ಬಗ್ಗೆ ಮಾಹಿತಿಯನ್ನು ನೀಡಿದರು. ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ. ಸ್ಟ್ಯಾನಿ ಬಿ ಲೋಬೊ ಮತ್ತು ಸಹಾಯಕ ಧರ್ಮಗುರುಗಳಾದ ವಂದನೀಯ ಫಾ ರೊಲ್ವಿನ್ ಅರಾನ್ನ ಯುವಜನರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಐಸಿವೈಎಂ ಉದ್ಯಾವರ ಘಟಕದ ಅಧ್ಯಕ್ಷ ರೊಯಲ್ ಕಾಸ್ತೆಲಿನೋ, ಕಾರ್ಯದರ್ಶಿ ಪ್ರಿಯಾಂಕಾ ಡಿಸೋಜಾ, ರಿತೇಶ್ ಡಿಸೋಜಾ ಮತ್ತಿತರರು ಈ ಸಂಧರ್ಭ ಹಾಜರಿದ್ದರು.