ಸ್ವಂತ ಮಕ್ಕಳನ್ನೇ ಸಾಕಾಲಾಗದೇ ಮಾರಾಟಕ್ಕೆ ಮುಂದಾದ ತಂದೆ: ಅಧಿಕಾರಿಗಳಿಂದ ರಕ್ಷಣೆ

ಕಾರ್ಕಳ: ತನ್ನಿಬ್ಬರು ಎಳೆಯ ಮಕ್ಕಳನ್ನು ಸಾಕಾಲಾಗದೇ ತಂದೆಯೊಬ್ಬ ಅವುಗಳನ್ನು ಮಾರಾಟ ಮಾಡಲು ಮುಂದಾಗಿರುವ ವಿಲಕ್ಷಣ ಘಟನೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ನೀರೆ ಎಂಬಲ್ಲಿ ನಡೆದಿದೆ.

ನೀರೆಯ ದಲಿತ ಸಮುದಾಯಕ್ಕೆ ಸೇರಿದ ಆನಂದ ಎಂಬಾತ ತನ್ನಿಬ್ಬರು ಮಕ್ಕಳನ್ನು ಹಣಕ್ಕಾಗಿ ಮಾರಾಟಕ್ಕೆ ಮುಂದಾಗಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಂದೆಯನ್ನು ವಿಚಾರಣೆ ಮಾಡಿ ಬಳಿಕ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಕ್ಕಳಿಬ್ಬರನ್ನು ಉಡುಪಿ ಸಂತೆಕಟ್ಟೆಯ ಕೃಷ್ಣಾನುಗ್ರಹ ದತ್ತು ಸಂಸ್ಥೆಗೆ ಒಪ್ಪಿಸಿದ್ದಾರೆ.

ನೀರೆಯ ಆನಂದನಿಗೆ ಕಳೆದ ೫ ವರ್ಷಗಳ ಹಿಂದೆ ವಿವಾಹವಾಗಿದ್ದು, ಈತನ ಪತ್ನಿ ಕಳೆದ ೨ ವರ್ಷಗಳ ಹಿಂದೆ ಗಂಡ ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ. ಆನಂದನಿಂದ ನಾಲ್ಕೂವರೆ ವರ್ಷದ ಗಂಡು ಹಾಗೂ ಮೂರುವರೆ ವರ್ಷದ ಹೆಣ್ಣುಮಗುವಿದ್ದು ಪತ್ನಿ ತನ್ನನ್ನು ತೊರೆದ ಹಿನ್ನಲೆಯಲ್ಲಿ ಆನಂದ ವಿಧಿಯಿಲ್ಲದೇ ಸರಕಾರಿ ಜಾಗದಲ್ಲಿ ಸಣ್ಣ ಗುಡಿಸಲು ನಿರ್ಮಿಸಿ ಅದರಲ್ಲೇ ತನ್ನಿಬ್ಬರು ಮಕ್ಕಳು ಹಾಗೂ ವೃದ್ದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದ, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತ ಕುಡಿತದ ಚಟದಿಂದ ಮಕ್ಕಳನ್ನು ಸಾಕುವುದೇ ಕಷ್ಟಕರವಾಗಿತ್ತು. ಈತನ ಪರಿಸ್ಥಿತಿಯನ್ನರಿತ ಕೆಲ ಮಂದಿ ಮಕ್ಕಳನ್ನು ನಮಗೆ ಕೊಡು ನಿನಗೆ ಹಣ ಕೊಡುತ್ತೇನೆ ಎಂದು ಪುಸಲಾಯಿಸಿದ್ದಾರೆ. ಕೂಲಿ ಕೆಲಸದ ಜತೆಗೆ ಮಕ್ಕಳನ್ನು ಸಾಕುವ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಆನಂದ ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದಾನೆ ಎನ್ನುವ ಖಚಿತ ಮಾಹಿತಿಪಡೆದ ಸ್ಥಳೀಯರು ಮಕ್ಕಳ ರಕ್ಷಣಾ ಘಟಕಕ್ಕೆ ಸುದ್ದಿ ತಿಳಿಸಿದ್ದರು.

ಸುದ್ಧಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ,ನೀರೆ ಪಂಚಾಯತ್ ಪಿಡಿಓ ಅಂಕಿತಾ ನಾಯಕ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾನು ಕೂಲಿಕಾರ್ಮಿಕನಾಗಿದ್ದು ಮಕ್ಕಳನ್ನು ಸಾಕಲು ಕಷ್ಟವಾದರೆ ನಮಗೆ ಕೊಡಿ ಎಂದು ಹಲವರು ಕೇಳಿದ್ದರು ಆದರೆ ತಾನು ಮಕ್ಕಳನ್ನು ಯಾರಿಗೂ ಕೊಡುವುದಿಲ್ಲವೆಂದು ಆನಂದ ಅಧಿಕಾರಿಗಳ ಬಳಿ ಹೇಳೀಕೊಂಡಿದ್ದಾನೆ. ಆದರೆ ಮಕ್ಕಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು ಇಬ್ಬರು ಪುಟ್ಟ ಮಕ್ಕಳನ್ನು ದತ್ತು ಸಂಸ್ಥೆಗೆ ಸೇರಿಸಿ ಪುನರ್ವಸತಿ ಕಲ್ಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!