ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ಉಡುಪಿ: ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಭಕ್ತಿ, ಶೃದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.

ಮಂಗಳವಾರ ರಾತ್ರಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ಅಧಿಕೃತ ಚರ್ಚು ಮಿಲಾಗ್ರಿಸ್ ಕೆಥೆಡ್ರಲ್ ಕಲ್ಯಾಣಪುರದಲ್ಲಿ ಬಲಿಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶವನ್ನು ನೀಡಿದರು.

ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ಪ್ರಧಾನ ಧರ್ಮಗುರು ವಂ|ಡಾ|ಲಾರೆನ್ಸ್ ಡಿಸೋಜಾ, ಸಹಾಯಕ ಧರ್ಮಗುರು ವಂ| ಕೆನ್ಯೂಟ್ ನೋರೊನ್ಹಾ, ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವಂ|ಲ್ಯಾನ್ಸಿ ಫೆರ್ನಾಂಡಿಸ್, ಪಿಲಾರ್ ಫಾದರ್ಸ್ ಇದರ ಮುಖ್ಯಸ್ಥರಾದ ವಂ|ಬೆನೆಟ್ ಉಪಸ್ಥಿತರಿದ್ದರು.ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇಡೀ ಜಿಲ್ಲೆಯ ಚರ್ಚುಗಳು ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಬಗೆ ಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಉಡುಪಿ ಜಿಲ್ಲೆಯ ಪ್ರಮುಖ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದವು.ಮಂಗಳವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು.

ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವುದರ ಮೂಲಕ ಯೇಸು ಸ್ವಾಮಿಯ ಜನನವನ್ನು ಕ್ರೈಸ್ತ ಭಾಂಧವರು ಸ್ವಾಗತಿಸಿದರು.ಜಿಲ್ಲೆಯ ಪ್ರಮುಖದ ಚರ್ಚುಗಳಾದ ಶಿರ್ವ ಆರೋಗ್ಯ ಮಾತೆಯ  ಉಡುಪಿ ಶೋಕಮಾತಾ,  ಕುಂದಾಪುರ ಹೊಲಿ ರೋಸರಿ ಚರ್ಚಿನಲ್ಲಿ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ   ಕ್ರಿಸ್ಮಸ್ ಆಚರಣೆಯ ಬಲಿಪೂಜೆಗಳು ನಡೆದವು.

ಹಬ್ಬದ ಅಂಗವಾಗಿ ಚರ್ಚುಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತಾದಿಗಳಿಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು. ಬಲಿಪೂಜೆಯ ಬಳಿಕ ಕ್ರೈಸ್ತ ಭಾಂಧವರು ಪರಸ್ಪರ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!