ಮತಾಂತರ, ಹಿಂದೂ ಧರ್ಮದ ಅವಹೇಳನ ಧರ್ಮಗುರುಗಳ ವಿರುದ್ದ ಕೇಸು ದಾಖಲು
ಉಡುಪಿ: ಉದ್ಯಾವರ ರಿಕ್ಷಾ ಚಾಲಕನ ಬಲವಂತದ ಮತಾಂತರ ಯತ್ನ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿಸಲು ಪ್ರಚೋದನೆ ನೀಡಿದ ಡಿವೈನ್ ಕಾಲ್ ಸೆಂಟರ್ನ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
ಉದ್ಯಾವರ ಬೊಳ್ಜೆಯ ನಿವೃತ್ತ ಶಿಕ್ಷಕಿ ಐರಿನ್ ಡಿಸಿಲ್ವ ನೆರೆಮನೆಯ ರಿಕ್ಷಾ ಚಾಲಕನಾದ ಪ್ರದೀಪ್ ಕೋಟ್ಯಾನ್(೩೧) ನನ್ನು ಆಗಸ್ಟ್ ೧೪ ರಂದು ಬೆಳಿಗ್ಗೆ ಮುಲ್ಕಿಯ ಕಾರ್ನಾಡ್ನ ಡಿವೈನ್ ಸೆಂಟರ್ಗೆ ಬಾಡಿಗೆಗೆಂದು ಕರೆದುಕೊಂಡು ಹೋಗಿದ್ದರು. ಈ ಸಂದರ್ಭ ಜೋರಾಗಿ ಮಳೆ ಬಂದ ಪರಿಣಾಮ ರಿಕ್ಷಾ ಚಾಲಕನನ್ನು ಪ್ರಾರ್ಥನ ಮಂದಿರದ ಇಬ್ಬರು ಮತಪ್ರಚಾರಕರು ಒಳಗೆ ಕರೆದುಕೊಂಡು ಹೋಗಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿ ,ಕ್ರೈಸ್ತ ಧರ್ಮಕ್ಕೆ ಸೇರುವಂತೆ ಒತ್ತಾಯ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೆ ತನ್ನ ಅಸೌಖ್ಯದ ಬಗ್ಗೆ ಕೌನ್ಸಿಲಿಂಗ್ ಮಾಡಿ ಗುಣಪಡಿಸುವುದಾಗಿ ಹೇಳಿ ಹಿಂದೂ ಧರ್ಮದ ದೇವರು ,ದೈವದ ವಿರುದ್ದ ಮಾತನಾಡುವಂತೆ ಒತ್ತಾಯ ಮಾಡಿಸಿ ಅದರ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಧರ್ಮದ ನಿಂದನೆ ಮಾಡಿರುವ ಬಗ್ಗೆ ರಿಕ್ಷಾ ಚಾಲಕ ಮುಲ್ಕಿ ಪೊಲೀಸರಿಗೆ ನೀಡಿದ ದೂರಿನಲ್ಲಿದೆ. ಈ ಬಗ್ಗೆ ಮುಲ್ಕಿ ಪೊಲೀಸರ ಠಾಣೆಯಲ್ಲಿ ಡಿವೈನ್ ಸೆಂಟರ್ನ ಧರ್ಮಗುರು ಅಬ್ರಹಂ ಹಾಗೂ ಪ್ರದೀಪ್ನನ್ನು ಅಲ್ಲಿಗೆ ಕರೆದುಕೊಂಡು ಹೋದ ಅಧ್ಯಾಪಕಿಯ ಮೇಲೆ ಬಲವಂತದ ಮತಾಂತರ ಹಾಗೂ ಧರ್ಮ ನಿಂದನೆ ಕೇಸು ದಾಖಲಾಗಿದೆ.
ಮತಾಂತರ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿರುವ ಡಿವೈನ್ ಕಾಲ್ ಸೆಂಟರ್ ವಿರುದ್ದ ನಿರ್ದಾಕ್ಷಣ್ಯ ಕ್ರಮ ಕೈಗೊಂಡ ಮುಲ್ಕಿ ಪೊಲೀಸರ ಕ್ರಮವನ್ನು ಸ್ವಾಗತಿಸುವುದಾಗಿ ವಿಶ್ವಹಿಂದೂ ಪರಿಷತ್ತಿನ ರಾಜ್ಯ ಸಂಚಾಲಕ ಶರಣ್ ಪಂಪ್ವೆಲ್ “ಉಡುಪಿ ಟೈಮ್ಸ್” ಗೆ ತಿಳಿಸಿದ್ದಾರೆ.