ತಲೆಗೆ ಗುಂಡು ಬಿದ್ದರೂ ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಬದುಕಿ ಬಂದ ಕೊಡಗಿನ ವೀರಯೋಧ

ಮಡಿಕೇರಿ ಜು.1: ಕಿರಿಯ ವಯಸ್ಸಿನಲ್ಲೇ ಶೌರ್ಯ ಚಕ್ರ ಪ್ರಶಸ್ತಿ ಪಡೆದ ಸಾಧನೆ ಮಾಡಿರುವ ಕೊಡಗಿನ ವೀರಯೋಧ ಎಚ್.ಎನ್.ಮಹೇಶ್ ಅವರು ಉಗ್ರರ ವಿರುದ್ಧ ನಡೆದ ಮತ್ತೊಂದು ಸಮರದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಗೆದ್ದು ಬಂದಿದ್ದಾರೆ. ಉಗ್ರರ ಗುಂಡೇಟಿನಿಂದ ಗಾಯಗೊಂಡಿದ್ದ ಅವರು ಇದೀಗ ಚೇತರಿಸಿಕೊಂಡಿದ್ದಾರೆ.


ರಜೆಯ ಮೇಲೆ ಊರಿಗೆ ಬಂದಿದ್ದ ಮಹೇಶ್ ಮೇ ೧೫ ರಂದು ಕರ್ತವ್ಯಕ್ಕೆ ಮರಳಿದ್ದರು. ಮೇ ೨೯ ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಉಗ್ರರು ಅಡಗಿರುವ ಮಾಹಿತಿ ಆಧರಿಸಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಉಗ್ರರು ಹಾರಿಸಿದ ಗುಂಡು ಮಹೇಶ್ ಅವರ ತಲೆಗೆ ಬಿದ್ದಿತ್ತು. ತಲೆಗೆ ಗುಂಟೇಟು ಬಿದ್ದರೂ ಹಿಂಜರಿಯದ ಮಹೇಶ್ ಉಗ್ರರತ್ತ ನಿರಂತರವಾಗಿ ಗುಂಡು ಹಾರಿಸಿದ್ದರು. ಆದರೆ ಇವರೊಂದಿಗಿದ್ದ ಇತರ ಸೈನಿಕರು ಮಹೇಶ್‌ರನ್ನು ಹಿಂದಕ್ಕೆ ಎಳೆದುಕೊಂಡು ಉಗ್ರರನ್ನು ಬಾಂಬ್ ಇಟ್ಟು ಸ್ಫೋಟಿಸಿದ್ದರು. ಉಗ್ರರು ಹಾರಿಸಿದ್ದ ಗುಂಡು ಬಲಭಾಗದ ಕಿವಿಯ ಹತ್ತಿರ ಒಳಹೊಕ್ಕು ದವಡೆಯ ಮೂಳೆಯನ್ನು ಸೀಳಿಕೊಂಡು ಮೂಗಿನ ಭಾಗದಿಂದ ಹೊರಬಂದಿತ್ತು. ಗುಂಡೇಟಿನಿಂಗ ಗಾಯವಾಗಿರುವ ಮುಖದ ಭಾಗಕ್ಕೆ ೫೦ ಹೊಲಿಗೆ ಹಾಕಲಾಗಿದೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮಹೇಶ್ ಅವರನ್ನು ಚಂಡೀಗಢದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಹೇಶ್ ಕೋಮಾಗೆ ಜಾರಿದ್ದರು. ಹಲವು ದಿನಗಳ ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದಾರೆ.


ಈ ಹಿಂದೆಯೂ ಉಗ್ರರ ವಿರುದ್ದ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಹೆಚ್.ಎನ್.ಮಹೇಶ್ ಇಲ್ಲಿಯವರೆಗೆ ಒಟ್ಟು ೮ ಮಂದಿ ಉಗ್ರವಾದಿಗಳನ್ನು ಕೊಂದು ಹಾಕಿದ್ದಾರೆ. ೨೦೧೮ರ ಆಗಸ್ಟ್ ತಿಂಗಳಲ್ಲಿ ಶೋಫಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರ ವಿರುದ್ದ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೋಯ್ಬದ ಇಬ್ಬರು ಉಗ್ರವಾದಿಗಳನ್ನು ಕೊಂದು ಹಾಕಿದ್ದಲ್ಲದೇ, ಮತ್ತೋರ್ವನನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಭಯೋತ್ಪಾದಕರ ವಿರುದ್ದ ನಡೆಸಲಾದ ಎನ್‌ಕೌಂಟರ್‌ಗಳಲ್ಲಿ ದೇಶಭಕ್ತಿ ಮತ್ತು ಅಪ್ರತಿಮ ಸಾಹಸ ಪ್ರದರ್ಶಿಸಿರುವ ಮಹೇಶ್ ಅವರಿಗೆ ರಾಷ್ಟ್ರಪತಿಗಳು ಶೌರ್ಯಚಕ್ರ ನೀಡಿ ಗೌರವಿಸಿದ್ದರು.

Leave a Reply

Your email address will not be published. Required fields are marked *

error: Content is protected !!