ಉಡುಪಿ ಜಿಲ್ಲೆಯ ರಜತ ಸಂಭ್ರಮಕ್ಕೆ ರಾಜ್ಯಪಾಲರಿಂದ ಚಾಲನೆ
ಉಡುಪಿ ಆ.25 (ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾಡಳಿತದ ವತಿಯಿಂದ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಉಡುಪಿ ಜಿಲ್ಲೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ರಾಜ್ಯದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು. Thank ಬಳಿಕ ಮಾತನಾಡಿದ ಅವರು, ಅವರು ಕನ್ನಡದಲ್ಲಿಯೇ ಎಲ್ಲರಿಗೂ ನಮಸ್ಕಾರ ಹಾಗೂ ಎಲ್ಲರನ್ನ ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎನ್ನುವ ಮೂಲಕ ಕನ್ನಡದಲ್ಲಿಯೇ ತಮ್ಮ ಮಾತನ್ನ ಆರಂಭಿಸಿದರು. ಉಡುಪಿ ಜಿಲ್ಲೆ ಪ್ರಶಾಂತೆಯನ್ನು ಹೊಂದಿರುವ ಕಾರಣ ಇಲ್ಲಿ ಪದೇ ಪದೇ ಬರಲು ಇಚ್ಛಿಸುತ್ತೇನೆ.
ಉಡುಪಿ ಜಿಲ್ಲೆ ದೇವತೆಗಳ ನಾಡು. ಇಲ್ಲಿನ ಮಂದಿರಗಳು ದೇವಾಲಯಗಳು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಉಡುಪಿ ಜಿಲ್ಲೆಯು ವೇಗವಾಗಿ ಅಭಿವೃದ್ಧಿಯನ್ನು ಪಡೆಯುತ್ತಿದ್ದು, ಕರಾವಳಿಯ ಉಡುಪಿ ಜಿಲ್ಲೆ, ಧಾರ್ಮಿಕ ಸಾಂಸ್ಕøತಿಕ ಕಲೆ ಹಾಗೂ ಪರಂಪರೆಗೆ ಪ್ರಾಕೃತಿಕ ಸೌಂದರ್ಯಕ್ಕೆ ವಿಶ್ವವಿಖ್ಯಾತಿಯನ್ನ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯು ಪ್ರಗತಿಪಥದಲ್ಲಿ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಗ್ರಣೀಯ ಜಿಲ್ಲೆಗಳಲ್ಲಿ ಒಂದಾಗಲಿದೆ ಎಂದರು.
ಉಡುಪಿ ಜಿಲ್ಲೆಯ ಕಾರ್ಕಳದ ಮೂರ್ತಿ ರಚನಾಕಾರರನ್ನು ಹೊಗಲಿದ ಅವರು, ಇಲ್ಲಿನ ಮೂರ್ತಿ ರಚನಾಕಾರರು ಕಲ್ಲಿನಲ್ಲಿಯೂ ಜೀವ ತುಂಬುವ ಕಲೆಯನ್ನ ಹೊಂದಿದ್ದಾರೆ. ಇಲ್ಲಿನ ಜನರಲ್ಲಿ ನಾಯಕತ್ವ ಶಿಸ್ತು ಸಂಯಮ ಮುಂತಾದ ಗುಣಗಳನ್ನು ಕಾಣಬಹುದು. ಇಲ್ಲಿನ ನಾಗರಾಧನೆ, ಭೂತಕೋಲ, ಹುಲಿವೇಷ ಹಾಗೂ ಇದರ ಸಾಂಸ್ಕೃತಿಕ ಕಲೆಗಳು ವಿಶಿಷ್ಟವಾಗಿದೆ. ಹಾಗೂ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಉಡುಪಿ ಜಿಲ್ಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸದಾ ಬದ್ದವಾಗಿರುತ್ತದೆ. ಜಿಲ್ಲೆಯು ಮುಂದಿನ ದಿನಗಳಲ್ಲಿಯೂ ಹೀಗೆ ಇನ್ನಷ್ಟು ವೇಗವಾಗಿ ಅಭಿವೃದ್ಧಿಯನ್ನು ಹೊಂದುವಂತಾಗಬೇಕು ಹಾಗೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಸದಾ ಜಿಲ್ಲೆಯ ಜನತೆಯೊಂದಿಗೆ ಇರುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲರಿಗೆ ಯಕ್ಷಗಾನದ ಕಿರೀಟವನ್ನು ತೊಡಿಸಿ ಉಡುಪಿಯ ಕೈಮಗ್ಗದ ಶಾಲನ್ನು ಹೊದಿಸಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ನಮ್ಮ ದೇಶವು ಅನೇಕರ ತ್ಯಾಗ ಬಲಿದಾನಗಳಿಂದ ಸ್ವತಂತ್ರ ಭಾರತವಾಗಿ ಸ್ವಾತಂತ್ರ್ಯವನ್ನು ಪಡೆಯಿತು ಹಾಗೆ 25 ವರ್ಷಗಳ ಹಿಂದಿನ ಅನೇಕರ ಪ್ರಯತ್ನಗಳಿಂದಾಗಿ ಉಡುಪಿಯು ಹೊಸ ಜಿಲ್ಲೆಯಾಗಿ ರೂಪುಗೊಂಡಿತು.
ಉಡುಪಿ ಜಿಲ್ಲೆ ಅದಾಗಲೇ ಬ್ಯಾಂಕಿಂಗ್ ವ್ಯವಸ್ಥೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುವ ಶಿಕ್ಷಣ ಸಂಸ್ಥೆಗಳನ್ನು ಹೊಂದಿತ್ತು. ಉಡುಪಿ ಜಿಲ್ಲೆ ಅಂದರೆ ಶಿಕ್ಷಣ, ಬ್ಯಾಂಕಿಂಗ್, ಉಪಹಾರ, ಹೋಟೆಲ್ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಉಡುಪಿ ಜಿಲ್ಲೆ ಸಮೃದ್ಧವಾದ ಜಿಲ್ಲೆ ಇದು ವಿದ್ಯಾವಂತರ ಜಿಲ್ಲೆ ಬುದ್ಧಿವಂತರ ಜಿಲ್ಲೆಯಾಗಿದೆ. ಉಡುಪಿ ಜಿಲ್ಲೆಯನ್ನು ಸ್ವಾವಲಂಬಿ ಜಿಲ್ಲೆಯಾಗಿ ಮಾಡಬೇಕು. ದೇಶದ ಶತಮಾನೋತ್ಸವದ ಅವಧಿಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ನಂಬರ್ ವನ್ ಜಿಲ್ಲೆಯಾಗಿ ಅಭಿವೃದ್ಧಿ ಹೊಂದಬೇಕು. ಈ ದಿಶೆಯಲ್ಲಿ ಪ್ರತಿಯೊಬ್ಬರು ಜಾತಿ, ಧರ್ಮ, ಪಕ್ಷ ಮರೆತು ಜಿಲ್ಲೆಯ ಅಭಿವೃದ್ಧಿ ಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ಉಡುಪಿ ಜಿಲ್ಲೆಯಾಗಿ ಘೋಷಣೆಯಾದ ಆರಂಭದಲ್ಲಿ ಉಸ್ತುವಾರಿ ಸಚಿವರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, ಅವಿಭಜಿತ ಜಿಲ್ಲೆಯ ಭಾಗವಾಗಿದ್ದಾಗ ಸರಕಾರಿ ಸೌಲಭ್ಯಕ್ಕಾಗಿ ದೂರದ ಮಂಗಳೂರಿಗೆ ಹೋಗಬೇಕಿತ್ತು, ಆದರೆ ಅದಕ್ಕಾಗಿ ಸರಿಯಾದ ಬಸ್ ಹಾಗೂ ರಸ್ತೆಯ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ಉಡುಪಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡಿ ಇಲ್ಲಿನ ಜನರಿಗೆ ಆಡಳಿತಾತ್ಮಕ ಸೇವೆಯನ್ನು ಹತ್ತಿರದಲ್ಲಿ ನೀಡುವ ವ್ಯವಸ್ಥೆ ಕಲ್ಪಿಸಲಾಯಿತು. ಇದೀಗ ಜಿಲ್ಲೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ್ದು,ಮುಂದಿನ ದಿನಗಳಲ್ಲಿ ಜನರು ಸರಕಾರಿ ಕಚೇರಿಗೆ ಯಾವುದೇ ಸೇವೆಗಾಗಿ ಬಂದಾಗ ಒಂದೇ ದಿನದಲ್ಲಿ ಕಚೇರಿಯಲ್ಲಿ ಜನರ ಕೆಲಸಗಳು ಆಗುವಂತಾಗಬೇಕು ಎಂದರು.
ಜಿಲ್ಲೆಯಲ್ಲಿ ಕೃಷಿಕರಿಗೆ, ಮೀನುಗಾರರಿಗೆ, ಹೈನುಗಾರಿಕೆಗೆ, ತೋಟಗಾರಿಕೆ ಸರಕಾರದ ಯೋಜನೆಗಳು ಸಿಗಬೇಕು. ಕರಾವಳಿ ಪ್ರವಾಸೋದ್ಯಮ ಅಭಿವೃದ್ದಿ ಆಗಬೇಕು. ಹೊಸ ಉದ್ದಿಮೆಗಳು ಆರಂಭಗೊಂಡು ಜಿಲ್ಲೆಯ ಯುವಕರು ಇಲ್ಲೇ ನೆಲೆ ಕಂಡುಕೊಳ್ಳುವಂತಾಗಿ ತಮ್ಮ ಪೋಷಕರನ್ನು ತಾವೇ ನೋಡಿಕೊಳ್ಳುವಂತಾಗಬೇಕು. ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲೆ ಉಜ್ವಲವಾಗಿ ಬೆಳೆಯ ಬೇಕು. ಅದಕ್ಕಾಗಿ ಜಿಲ್ಲೆಯ ಯುವಕರ ಭವಿಷ್ಯ ಉಜ್ವಲವಾಗಿ ರೂಪಿಸಲು ಸಾಧ್ಯವಾಗುವ ಅವಕಾಶ ಕಲ್ಪಿಸಬೇಕು ಎಂದರು. ಇದೇ ವೇಳೆ 25 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯಾಗಿ ಘೋಷಣೆ ಆಗುವಲ್ಲಿ ಸಹಕರಿಸಿದ ಅಂದಿನ ಶಾಸಕರು, ಸಚಿವರು, ಜನಪ್ರತಿನಿಧಿಗಳನ್ನು ನೆನೆಸಿಕೊಂಡು ಅಂದಿನ ದಿನಗಳನ್ನು ಮೆಲುಕುಹಾಕಿಕೊಂಡರು ಹಾಗೂ ಅಂದು ಸಹಕರಿಸಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಜಿಲ್ಲೆಯ ಬೇರೆ ಕಡೆಗಳಲ್ಲಿ ಉಪವಿಭಗಾಧಿಕಾರಿಗಳ ಕಚೇರಿ, ಎಸಿಎಫ್ ಕಚೇರಿ, ಆರ್‍ಟಿಒ ಕಚೇರಿ ಆದಾಗ ಕೆಲಸಗಳು ಇನ್ನಷ್ಟು ಸುಲಭವಾಗಿದೆ ಎಂದು ಸರಕಾರಕ್ಕೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಮೊದಲ ಉಸ್ತುವಾರಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಮೊದಲ ಜಿಲ್ಲಾಧಿಕಾರಿ ಕಲ್ಪನಾ ಗೋಪಾಲನ್ ಹಾಗೂ ಜಿಲ್ಲೆಯ ರಜತಮಹೋತ್ಸವದ ಕಾರ್ಯಕ್ರಮಕ್ಕೆ ಧನಸಹಾಯ ನೀಡಿದ ದಾನಿಗಳಾದ ಮಣಿಪಾಲದ ಮಾಹೆಯ ಉಪ ಕುಲಪತಿ ಲೆಫ್ಟಿನೆಂಟ್ ಕರ್ನಲ್ ವೆಂಕಟೇಶ್, ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಅಂಬಲಪಾಡಿ, ನಿಟ್ಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿನಯ್ ಹೆಗ್ಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಮಾಜಿ ಮುಖ್ಯಮಂತ್ರಿ ಡಾ.ಎಂ ವೀರಪ್ಪ ಮೊಯಿಲಿ,
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ. ಆರ್.ಮೆಂಡನ್, ವಿಧಾನಪರಿಷತ್ ಶಾಸಕರುಗಳಾದ ಮಂಜುನಾಥ ಭಂಡಾರಿ, ದಿ. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತ್ತಿತರರು ಉಪಸ್ಥಿತರಿದ್ದರು.