ಅಂತ್ಯಾಕ್ಷರಿ ಹಾಡುತ್ತ 9 ಪ್ರವಾಸಿಗರ ಜೀವ ಅಂತ್ಯ: ಐವರು ಸ್ಥಿತಿ ಗಂಭೀರ
ಉಡುಪಿ: ಶನಿವಾರ ಸಂಜೆ 5.30 ಕ್ಕೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಕುದುರೆಮುಖ ಘಾಟಿಯಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ ಗಾಯಗೊಂಡಿರುವ 24 ಮಂದಿಗೆ ಕಾರ್ಕಳ ಸರ್ಕಾರಿ ಹಾಗೂ ಮಣಿಪಾಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 5 ಪ್ರವಾಸಿಗರು ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದಲ್ಲಿ ಒಟ್ಟು 9 ಮಂದಿಮೃತರಾಗಿದ್ದು, ಆರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಮೃತರು ಆರ್.ಯೋಗೀಂದ್ರ (24) ಮೈಸೂರಿನ ಚಾಮುಂಡಿಬೆಟ್ಟ, ಇ.ವಿನುತಾ (28) ಶ್ರೀರಂಗಪಟ್ಟಣದ ಮೊಗೇರಳ್ಳಿ, ರಕ್ಷಿತಾ (27) ಮೈಸೂರಿನ ಬೋಗಾದಿ, ಅನುಜ್ಞಾ (26) ಮೈಸೂರಿನ ಜೆಎಸ್‌ಎಸ್ ಲೇಔಟ್, ಬಸವರಾಜ್ (24), ಮಹೇಶ್ (38) ನಂಜನಗೂಡಿನ ಅಂಬ್ಲೆ, ಪ್ರೀತಮ್(21), ರಾಧಾರವಿ (22), ಮಾರುತಿ.
ತೀವ್ರ ನಿಗಾ ಘಟಕದಲ್ಲಿ ಯಮುನಾ (ಕೊಳ್ಳೆಗಾಲದ ಉತ್ತರಹಳ್ಳಿ), ಲಕ್ಷ್ಮೀ, ಪ್ರದೀಪ (ಟಿ. ನರಸೀಪುರದ ಭೈರಪುರ), ಆರ್.ಕಾವ್ಯ, ಜಿ.ಎನ್.ಕಾವ್ಯ (ಮೈಸೂರಿನ ಮಾತಳ್ಳಿ), ಎಂ.ವಿ.ಕಾವ್ಯ (ಕೊಡಗಿನ ಕುಶಾಲನಗರ), ರಘುವೀರ್, ಸಿ. ಸತೀಶ್, ವಿ.ಜಿ.ರಂಜಿತಾ (ಮೈಸೂರಿನ ಹೆಬ್ಬಾಳ ) ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ ಹಲವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಮನೆಯವರ ಆತಂಕ ಹೆಚ್ಚಾಗಿದ್ದು ಪೋಷಕರು ಅನ್ನನೀರುಬಿಟ್ಟು ರೋಧಿಸುತ್ತಿರುವ ದೃಶ್ಯ ಮನಕಲಕುವಂತಿದೆ. ಚಿನ್ನಾಭರಣ,ಸೊತ್ತುಗಳನ್ನು ಸಂಬಂಧಿಕರ ವಶಕ್ಕೆ ಒಪ್ಪಿಸಿ ಸಾರ್ವಜನಿಕರ ಪ್ರಶಂಸೆ ಗಿಟ್ಟಿಸಿದ ಪೊಲೀಸರು
ಈ ಅಪಘಾತ ನಡೆದ ಕೇವಲ 15 ನಿಮಿಷದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಎಸ್‌ಐ ನಾಸಿರ್‌ಹುಸೇನ್ ನೇತೃತ್ವದ ಪೊಲೀಸರ ತಂಡ ಘಟನಾಸ್ಥಳಕ್ಕೆ ಧಾವಿಸಿ ಮೃತಪಟ್ಟ ಹಾಗೂ ಗಾಯಾಳುಗಳ ಮೈಮೇಲಿದ್ದು ಚಿನ್ನಾಭರಣ,ನಗದು ಹಾಗೂ ಇನ್ನಿತರೇ ಅತ್ಯಮೂಲ್ಯ ವಸ್ತುಗಳನ್ನು ವಶಕ್ಕೆ ಪಡೆದು ಭಾನುವಾರ ಎಲ್ಲಾ ವಸ್ತುಗಳನ್ನು ಆಯಾ ಸಂಬಂಧಿಕರಿಗೆ ಮುಟ್ಟಿಸಿರುವ ಕಾರ್ಯ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ. ಘಟನೆ ನಡದೆ 3 ಗಂಟೆಯೊಳಗಾಗಿ ರಾತ್ರಿ9 ಗಂಟೆಯೊಳಗಾಗಿ ಅಪಘಾತಕ್ಕೀಡಾದ ಬಸ್ಸನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಾಲಕನ ನಿರ್ಲಕ್ಷ್ಯ ಕಾರಣ
ಮಾಳ ಭೀಕರ ಬಸ್ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಕಾರಣ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಪಘಾತಕ್ಕೂ ಕೆಲವೇ ಕ್ಷಣಗಳು ಮುನ್ನ ಬಸ್‌ನ ಡಿಕ್ಕಿಯ ಬಾಗಿಲು ತೆರೆದುಕೊಂಡು ಅದರಲ್ಲಿದ್ದ ಅಡುಗೆ ಸಾಮಾಗ್ರಿಗಳು ರಸ್ತೆಗೆ ಬಿದ್ದಿದ್ದವು. ಇದನ್ನು ನೋಡಿ ಬಸ್‌ನೊಳಗಿದ್ದ ಪ್ರಯಾಣಿಕರು ಜೋರಾಗಿ ಕಿರುಚಿದಾಗ, ಚಾಲಕ ಹೆದರಿ ಹಿಂತಿರುಗಿ ನೋಡಿದ್ದಾನೆ. ಅಷ್ಟರಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಬಂಡೆಗೆ ಬಡಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಸ್ ಬಂಡೆಗೆ ಡಿಕ್ಕಿಯಾಗಿ ಹಲವು ಮೀಟರ್‌ಗಳವರೆಗೆ ಉಜ್ಜಿಕೊಂಡು ಹೋಗಿದೆ. ಇದರಿಂದ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸೇರಿದಂತೆ ಮುಂಭಾಗದಲ್ಲಿ ಕುಳಿತಿದ್ದವರು ಮೃತಪಟ್ಟಿದ್ದಾರೆ. ಬಸ್‌ನೊಳಗೆ ಸಿಲುಕಿದ್ದ ದೇಹಗಳನ್ನು ಕ್ರೇನ್ ತರಿಸಿ ಹೊರಗೆಳೆಯಬೇಕಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.