ಮಾದರಿಯಾಗುವಂತೆ 75ರ ವರ್ಷಾಚರಣೆ ಉಡುಪಿಯ ಯಕ್ಷಗಾನ ಕಲಾರಂಗ
ಕುತ್ಪಾಡಿ ರಾಮಚಂದ್ರ ಗಾಣಿಗರು ಮುಂಬೈಯಲ್ಲಿ ಉದ್ಯಮಿ. ಕಷ್ಟದಲ್ಲಿ ಬದುಕು ಕಟ್ಟಿಕೊಂದು ಈಗ ಸಮಾಜದಲ್ಲಿ ಪ್ರತಿಷ್ಠಿತರಾಗಿ ಮಾನ್ಯರಾದವರು. ರಾಮಚಂದ್ರ ಗಾಣಿಗರು ತಮ್ಮ 75ರ ಆಚರಣೆಯನ್ನು ಯಾವ ಆಡಂಬರವಿಲ್ಲದೆ ಅರ್ಥಪೂರ್ಣವಾಗಿ ಆಚರಿಸಲು ಮುಂದಾದಾಗ ಅವರ ಗಮನಕ್ಕೆ ಬಂದದ್ದು ಪ್ರಧಾನಿಯವರ ಸೂರಿಲ್ಲದವರಿಗೆ ಮನೆಕಟ್ಟಿ ಕೊಡುವ ಯೋಜನೆ. ತನ್ನ ಹುಟ್ಟೂರಿನಲ್ಲಿ ಮನೆ ಇಲ್ಲದ ಬಡವರಿಗೆ ನಾಲ್ಕು ಮನೆ ಕಟ್ಟಿಕೊಡಲು ಸಂಕಲ್ಪಿಸಿದರು.
ಮುಂಬಯಿಯಲ್ಲಿರುವ ಅವರಿಗೆ ಈ ಯೋಜನೆ ಅನುಷ್ಠಾನಕ್ಕೆ ತರುವುದು ಹೇಗೆ ಎಂದು ಯೋಚಿಸುತ್ತಿರುವಾಗ ಥಟ್ಟನೆ ಹೊಳೆದುದು ಉಡುಪಿಯ ಯಕ್ಷಗಾನ ಕಲಾರಂಗ. ಸಮಾಜಮುಖಿ ಕಾರ್ಯಗಳಲ್ಲಿ ಸದಾ ಕ್ರಿಯಾಶೀಲವಾಗಿರುವ ಈ ಸಂಸ್ಥೆ ಈಗಾಗಲೆ 12 ಮನೆಗಳನ್ನು ವಿದ್ಯಾಪೆÇೀಷಕ್ ವಿದ್ಯಾರ್ಥಿಗಳಿಗೆ ನಿರ್ಮಿಸಿಕೊಟ್ಟಿದ್ದು ಅವರಿಗೆ ಗೊತ್ತಿತ್ತು, ಹಾಗಾಗಿ ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರನ್ನು ಸಂಪರ್ಕಿಸಿ ತನ್ನ ಯೋಜನೆ ಅರುಹಿ ಇದನ್ನು ಕಾರ್ಯಗತಮಾಡಲು ನಿಮ್ಮ ಸಹಾಯ ಬೇಕೆಂದು ಕೋರಿದರು. ರೂ. 12 ಲಕ್ಷ ವನ್ನು ಇದಕ್ಕೆ ಕೂಡಲೇ ನೀಡುವುದಾಗಿ ಹೇಳಿದರು.
ಸಮಾಜಕ್ಕೆ ಒಳಿತಾಗುವ ಯಾವುದೇ ಕೆಲಸವನ್ನು ಒಂದು ತಂದವಾಗಿ ಮಾಡುತ್ತಿರುವ ಕಲಾರಂಗ ಇದನ್ನು ಒಪ್ಪಿಕೊಂಡು ವಿದ್ಯಾಪೆÇೀಷಕ್ನ ಅರ್ಹ ಮೂವರು ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಲು ನಿರ್ಧರಿಸಿತು.
ಪ್ರಸ್ತುತ ದ್ವಿತೀಯ ಪಿ.ಯು.ಸಿ ಕಲಿಯುತ್ತಿರುವ ಸಂಪಿಗೆನಗರದ ಶೃಜಾ, ಬಿಜೂರಿನ ವಿನೋದಾ, ಯಳಜಿತ್ನ ಪ್ರಜ್ವಲ್ ಈ ಮೂವರನ್ನು ಆಯ್ಕೆ ಮಾಡಿತು. ಯಕ್ಷಗಾನ ಕಲಾರಂಗ ಮನೆಕಟ್ಟಿಸುವಾಗಲೆಲ್ಲಾ ಅದರ ಜವಾಬ್ದಾರಿ ಹೊತ್ತು ಕ್ಲಪ್ಪ ಸಮಯದಲ್ಲಿ ಅಚ್ಚುಕಟ್ಟಾಗಿ ಮುಗಿಸಿಕೊಡುವವರು ಸಂಸ್ಥೆಯ ಉಪಾಧ್ಯಕ್ಷರಾಗಿರುವ ಎಂ. ಗಂಗಾಧರ ರಾವ್. ಮನೆಕಟ್ಟಲು ಬೇಕಾದ ಎಲ್ಲ ಆಡಳಿತಾತ್ಮಕ ಪರವಾನಿಗೆಯ ಅಲೆದಾಟ, ಮರಳಿನ ಅಭಾವ ಇನ್ನೂ ಹಲವು ಅಡೆ, ತಡೆಗಳನ್ನು ಮೀರಿ ಮೂರು-ನಾಲ್ಕು ತಿಂಗಳಲ್ಲಿ ಸುಂದರವಾದ ಮೂರು ಮನೆಗಳನ್ನು ನಿರ್ಮಿಸುವಲ್ಲಿ ಅವರ ಕತೃತ್ವ ಶಕ್ತಿ ಯಶಸ್ವಿಯಾಗಿದೆ.
ಈ ಮೂರು ಮನೆಗಳ ಉದ್ಘಾಟನಾ ಕಾರ್ಯಕ್ರಮ ಮೇ 2 ರಂದು ಯಕ್ಷಗಾನ ಕಲಾರಂಗದ ದಾನಿಗಳಾದ ಯು. ವಿಶ್ವನಾಥ ಶೆಣೈ, ಭುವನೇಂದ್ರ ಕಿದಿಯೂರು, ಸೂರ್ಯಪ್ರಕಾಶ್, ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ, ಯುವರಾಜ ಸಾಲ್ಯಾನ್, ಡಾ. ದೀಪಕ್ ಪ್ರಭು, ಬಾಬುರಾಯ ಶೆಣೈ, ವಿಶ್ವೇಶ್ವರ ಅಡಿಗ ಮೊದಲಾದ ಗಣ್ಯರ ಸಮಕ್ಷದಲ್ಲಿ ಜರಗಿತು. ಮೂರೂ ಮನೆಗಳ ಹಸ್ತಾಂತರ ಕ್ರಮವಾಗಿ ಉದ್ಯಾವರದ ಸಂಪಿಗೆನಗರ, ಬೈಂದೂರಿನ ಯಳಜಿತ್ ಹಾಗೂ ಬಿಜೂರಿನಲ್ಲಿ ಜರಗಿತು. ಕುತ್ಪಾಡಿ ರಾಮಚಂದ್ರ ಗಾಣಿಗ ಶ್ರೀಮತಿ ಸುಗುಣ ಗಾಣಿಗ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗಾಣಿಗರ ಅಣ್ಣ ಕೆ. ಗೋಪಾಲ್ ಹಾಗೂ ಸಹೋದರರು, ಗಾಣಿಗರ ಮಕ್ಕಳು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಕೆ. ಗಣೇಶ್ ರಾವ್ರ ನೇತೃತ್ವದಲ್ಲಿ ಇಡೀ ತಂಡ ಸಕ್ರಿಯವಾಗಿ ಭಾಗವಹಿಸಿತು. ಸಂಸ್ಥೆಯ ವತಿಯಿಂದ ಗಾಣಿಗ ದಂಪತಿಗಳನ್ನು ಗೌರವಿಸಲಾಯಿತು.
ಸಮಾಜದಲ್ಲಿ ಕೇವಲ ಸ್ವಾರ್ಥ, ಆಡಂಬರ ಮಾತ್ರ ತುಂಬಿದೆ ಎಂದು ಗೊಣಗುವವರಿಗೆ ಇದು ಉತ್ತರವಾಗಿದೆ. ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಘಟಿಸುತ್ತಿರುವ ಈ ಕಾಲ ಘಟ್ಟದಲ್ಲಿ ಇಂತಹ ರಚನಾತ್ಮಕ ಕೆಲಸ ಸಮಾಜಕ್ಕೆ ನೀಡುವ ದೊಡ್ಡ ಸಂದೇಶವಾಗಿದೆ.