ಇನ್ನೂ ಸಂಚಾರ ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು; ಅಂಗೀಕಾರಗೊಂಡ ಮಸೂದೆ
ಸೀಟ್ ಬೆಲ್ಟ್, ಹೆಲ್ಮೆಟ್ ಇಲ್ಲ ಅಂದ್ರೆ ಬೀಳತ್ತೆ ₹1,000 ದಂಡ 3 ತಿಂಗಳವರೆಗೆ ಚಾಲನ ಪರವಾನಗಿ ರದ್ದು ಮಾಡುವಂತಹ, ಕುಡಿದು ವಾಹನ ಚಲಾಯಿಸಿದರೆ 6 ತಿಂಗಳ ಜೈಲು ಶಿಕ್ಷೆ ನೀಡುವ ಪ್ರಸ್ತಾವಗಳನ್ನು ತಿದ್ದುಪಡಿ ಮಸೂದೆ ಹೊಂದಿದೆ.
ಮಸೂದೆಗೆ ಲೋಕಸಭೆಯು ಕಳೆದ ವಾರ ಒಪ್ಪಿಗೆ ಕೊಟ್ಟಿತ್ತು. ರಾಜ್ಯಸಭೆಯಲ್ಲಿ ಮಸೂದೆ ಪರ 108 ಮತ್ತು ವಿರುದ್ಧ 13 ಮತಗಳು ಚಲಾವಣೆಯಾದವು.
ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ ಇಲ್ಲ. ಹಾಗಿದ್ದರೂ, ಕೆಲವು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸರ್ಕಾರವು ಮಸೂದೆ ಅಂಗೀಕಾರ ಆಗುವಂತೆ ನೋಡಿಕೊಂಡಿದೆ. ಮಸೂದೆಯನ್ನು ರಾಜ್ಯಸಭೆಯ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯವನ್ನು ಸರ್ಕಾರ ತಿರಸ್ಕರಿಸಿದೆ.
ತೆರಿಗೆ ಸಂಗ್ರಹದ ವಿಚಾರದಲ್ಲಿ ರಾಜ್ಯಗಳ ಅಧಿಕಾರವನ್ನು ಈ ಮಸೂದೆಯು ಕಸಿದುಕೊಳ್ಳುತ್ತದೆ. ಹಾಗಾಗಿ, ಮಸೂದೆಯ ವಿವರವಾದ ಪರಿಶೀಲನೆ ಅಗತ್ಯ. ಹಾಗೆಯೇ, ಮಸೂದೆಯು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಗಳನ್ನು ಖಾಸಗಿ ಕಂಪನಿಗಳಿಗೆ ನೀಡುತ್ತದೆ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿದವು. ಆದರೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಅಂಶಗಳನ್ನು ಅಲ್ಲಗಳೆದರು. ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಮಸೂದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಹಾಗಾಗಿ ಮಸೂದೆಗೆ ಲೋಕಸಭೆಯಲ್ಲಿ ಮತ್ತೊಮ್ಮೆ ಅನುಮತಿ ಪಡೆದುಕೊಳ್ಳಬೇಕಾಗಿದೆ.
ಲೋಕಸಭೆಯಲ್ಲಿ ಅಂಗೀಕಾರ ಆಗಿರುವ ಮಸೂದೆಗೆ ಕೆಲವು ಬದಲಾವಣೆ ಮಾಡಿ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಅಂಗೀಕಾರ ಆದ ಅದೇ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ ಎಂದು ಗಡ್ಕರಿ ಆರಂಭದಲ್ಲಿ ಪ್ರತಿಪಾದಿಸಿದರು. ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಯಲ್ಲಿ ಕೆಲವು ಮುದ್ರಣ ದೋಷಗಳಿದ್ದವು. ಹಾಗಾಗಿ ಅವುಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಬಳಿಕ ಹೇಳಿದರು. ಮಸೂದೆಗೆ ಕಾಂಗ್ರೆಸ್ ಬೆಂಬಲ ಕೊಟ್ಟಿತು.
ಪ್ರಸ್ತಾವಗಳು
ಪ್ರಸ್ತಾವಿತ ಸಂಚಾರ ನಿಯಮಗಳ ಉಲ್ಲಂಘನೆ ವಿಧಿಸಲಾಗುವ ದಂಡಗಳು
ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ ₹ 10,000, 6 ತಿಂಗಳು ಜೈಲು
ಅತಿ ವೇಗದ ಚಾಲನೆ ₹ 1000- ₹ 2000, 3 ತಿಂಗಳು ಜೈಲು
ವಿಮೆ ಇಲ್ಲದ ಡ್ರೈವಿಂಗ್ ₹ 2000
ಹೆಲ್ಮೆಟ್ ಧರಿಸದೆ ಡ್ರೈವಿಂಗ್ ₹1000
ಬಾಲಪರಾಧಿಗಳ ರಸ್ತೆ ಅಪರಾಧ ಪ್ರಕರಣ ₹ 25,000
ಲೈಸೆನ್ಸ್ ಇಲ್ಲದೆ ಅನಧಿಕೃತ ವಾಹನ ಚಾಲನೆ ₹ 5000
ಕುಡಿದು ವಾಹನ ಚಾಲನೆ ₹ 10,000, 6 ತಿಂಗಳು ಜೈಲು
ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ, ಇತ್ಯಾದಿ ₹ 5000, 6 –12 ತಿಂಗಳು ಜೈಲು