ಬಡಗಬೆಟ್ಟು ಸೊಸೈಟಿಗೆ 6 ಕೋಟಿ ರೂ. ನಿವ್ವಳ ಲಾಭ,ಶೇ. 15ರಷ್ಟು ಡಿವಿಡೆಂಡ್ ಘೋಷಣೆ
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಸಕ್ತ ಆರ್ಥಿಕ
ವರ್ಷದಲ್ಲಿ 6 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ. 15ರಷ್ಟು
ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಉಡುಪಿ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಭಾನುವಾರ ನಡೆದ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿದರು.
ಪ್ರಸಕ್ತ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 27,687 ಸದಸ್ಯರಿಂದ 4.12 ಕೋಟಿ ರೂ.ಪಾಲು ಬಂಡವಾಳ ಹಾಗೂ 300.88 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. 267.51 ಕೋಟಿ ರೂ. ಸಾಲ ನೀಡಿದೆ ಎಂದರು.
ಭಾರತೀಯ ಜೀವ ವಿಮಾ ನಿಗಮದೊಂದಿಗೆ ವ್ಯವಹಾರ ಒಪ್ಪಂದ ಮಾಡಿಕೊಂಡು ಭಾಗ್ಯಲಕ್ಷ್ಮೀ ಮೈಕ್ರೋ ಇನ್ಶೂರೆನ್ಸ್ ಜೀವವಿಮಾ ಪಾಲಿಸಿ ಹಾಗೂ ಸ್ಟಾರ್ ಹೆಲ್ತ್ ಜೀವ ವಿಮೆ ಪಾಲಿಸಿ ವಿತರಿಸಲಾಗುತ್ತಿದೆ.
ಸಂಸ್ಥೆಯು ಪ್ರಸ್ತುತ 9 ಹವಾ ನಿಯಂತ್ರಿತ ಸ್ವಂತ ಶಾಖೆಗಳನ್ನು ಹೊಂದಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಸಂತೃಪ್ತ ಗ್ರಾಹಕರನ್ನು ಹೊಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿ ನೇಮಕಗೊಂಡ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಾಕ್ಷಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಡುಪಿ
ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಕುಂದಾಪುರ ವಿಭಾಗದ ಸಹಕಾರ ಸಂಘಗಳ ಉಪನಿಬಂಧಕಿ ಚಂದ್ರ ಪ್ರತಿಮಾ, ಸಂಘದ ಆಡಳಿತ ಮಂಡಳಿ ಸದಸ್ಯ ಪುರುಷೋತ್ತಮ ಪಿ. ಶೆಟ್ಟಿ, ಸಯ್ಯದ್ ಅಬ್ದುಲ್ ರಜಾಕ್, ವಸಂತ ಕೆ. ಕಾಮತ್, ಟಿ.ಎ. ವಿನಯ ಕುಮಾರ್,
ಜಯಾನಂದ ಸಿ. ಮೈಂದನ್, ಪದ್ಮನಾಭ ಕೆ. ನಾಯಕ್, ರಘುರಾಮ ಎಸ್. ಶೆಟ್ಟಿ, ಜಾರ್ಜ್ ಸ್ಯಾಮ್ಯ್‌ವೆಲ್, ಸದಾಶಿವ ನಾಯ್ಕ್, ಜಯ ಶೆಟ್ಟಿ ಮತ್ತು ಗಾಯತ್ರಿ ಎಸ್. ಭಟ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಎಲ್. ಉಮಾನಾಥ್ ವಂದಿಸಿದರು.