ಕರುಣೆ ಇಲ್ಲದ ’56’ ಇಂಚು ಎದೆ: ಸಿದ್ದರಾಮಯ್ಯ
ಬೆಂಗಳೂರು: 56 ಇಂಚಿನ ಪ್ರಧಾನಿ ನರೇಂದ್ರ ಮೋದಿಗೆ ನೆರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸುವ ಕರುಣೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಮಂಡಲದ ಅಧಿವೇಶನದ ಮೊದಲ ದಿನ ಕಲಾಪವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ 56 ಇಂಚು ಎದೆ ಹೊಂದಿರುವುದಾಗಿ ಹೇಳುತ್ತಾರೆ ಅವರ ಹೃದಯದಲ್ಲಿ ಕರುಣೆಯೇ ಇಲ್ಲವಾದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೆರೆ ಸಂತ್ರಸ್ತರನ್ನು ಪ್ರಧಾನಿ ಭೇಟಿಯಾಗಲಿಲ್ಲ, ಸಾಕಷ್ಟು ವಿಳಂಬ ಮಾಡಿ ತುಂಬಾ ಕಡಿಮೆ ಪ್ರಮಾಣದ ಪರಿಹಾರ ಬಿಡುಗಡೆ ಮಾಡಿದ್ದಾರೆ .
ಕಾಂಗ್ರೆಸ್ ಮುಖಂಡ ಕೃಷ್ಣ ಬೈರೇಗೌಡ ಮಾತನಾಡಿ, ನೆರೆಯಿಂದ 38 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಅಂದಾಜಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಕೇವಲ 1, 200 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ 303 ಕೋಟಿ ರೂ. ನಮ್ಮದೇ ಎಸ್ಡಿಆರ್ಎಫ್ ನಿಧಿಯಿಂದ ಬಂದಿದೆ, ಅದು ಹೇಗಾದರೂ ಕರ್ನಾಟಕಕ್ಕೆ ಸಲ್ಲುತ್ತದೆ. ಬಿಡುಗಡೆಯಾದ 990 ಕೋಟಿ ರೂ. ಕೇವಲ ಕಣ್ಣೋರೆಸುವ ತಂತ್ರವಾಗಿದೆ ಎಂದು ಟೀಕಿಸಿದರು.
ಖಾಸಗಿ ಮಾಧ್ಯಮಗಳ ಚಿತ್ರೀಕರಣ ನಿರ್ಬಂಧ ವಿಚಾರ ಪ್ರಸ್ತಾಪಿಸಿದ ಕೃಷ್ಣ ಬೈರೇಗೌಡ, ಮಾಧ್ಯಮಗಳನ್ನು ಸದನದದಿಂದ ಹೊರಗಿಟ್ಟು, ಅವರ ಹಕ್ಕುಗಳನ್ನು ಕಸಿದುಕೊಂಡಿದ್ದೀರಿ. ಸರ್ಕಾರದ ರಬ್ಬರ್ ಸ್ಟಾಂಪ್ ಆಗಿ ಸ್ಪೀಕರ್ ವರ್ತಿಸುತ್ತಿದ್ದಾರೆ. ಶೂನ್ಯ ವೇಳೆ, ಪ್ರಶ್ನೋತ್ತರ ವೇಳೆ ಕಲಾಪದ ಪಟ್ಟಿಯಲ್ಲಿ ಎಂದು ಆರೋಪಿಸಿದರು.
ನೆರೆ ವಿಚಾರದ ಬಗ್ಗೆ ಧೀರ್ಘವಾಗಿ ಚರ್ಚೆ ನಡೆಸಬೇಕಾದ ಅಗತ್ಯವಿರುವುದರಿಂದ ಕಲಾಪದ ಅವಧಿಯನ್ನು ವಿಸ್ತರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಹೈಕಮಾಂಡ್ ಎಂದೂ ಪ್ರವೇಶ ಮಾಡಿರಲಿಲ್ಲ. ಸ್ವಾತಂತ್ರ್ಯವಾಗಿ ನಿರ್ಧಾರ ಕೈಗೊಳ್ಳುತ್ತಿದೆ. ಆದರೆ, ಯಡಿಯೂರಪ್ಪ ಸ್ವಾತಂತ್ರ್ಯವಾಗಿ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು.