ಉಡುಪಿ ನಗರಕ್ಕೆ ಕೊಳಚೆ ನಿರ್ಮೂಲ ಮಂಡಳಿಯಿಂದ 500 ಮನೆಗಳು ಮಂಜೂರು
ಉಡುಪಿ: ನಗರಕ್ಕೆ ಕೊಳಚೆ ನಿರ್ಮೂಲನೆ ಮಂಡಳಿಯಿಂದ 500 ಮನೆಗಳು ಮಂಜೂರಾಗಿದ್ದು ಇದನ್ನು ಉಡುಪಿ ನಗರಸಭೆ ವ್ಯಾಪ್ತಿಯ ಹೆರ್ಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಇದನ್ನು ವಸತಿ ಗೃಹವಾಗಿ ಪರಿವರ್ತಿಸುವ ಬಗ್ಗೆ , ಈಗಾಗಲೇ ನಿರ್ಮಾಣವಾದ ಬೆಂಗಳೂರಿನ ಶೇಷಾದ್ರಿ ಪುರಂನಲ್ಲಿ ನಿರ್ಮಿಸಿದ ಮನೆಗಳಿಗೆ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಅಲ್ಲಿ ನಿರ್ಮಿಸಿರುವ ಫ್ಲಾಟ್ನ ಗುಣಮಟ್ಟವನ್ನು ಪರಿಶೀಲಿಸಿ ಇಂತಹಾ ಯೋಜನೆ ಉಡುಪಿ ನಗರಕ್ಕೆ ಹೊಂದಾಣಿಕೆ ಆಗಬಹುದೆಂಬ ಪರಾಮರ್ಶೆಯನ್ನು ಅಲ್ಲಿನ ಸ್ಲಂ ಬೋರ್ಡ್ ಅಧಿಕಾರಿ, ಇಂಜಿನಿಯರ್ ಗಳ ಜೊತೆ ಸಭೆ ನಡೆಸಿದರು.
ಮುಂದಿನ 2 – 3 ತಿಂಗಳಿನ ಒಳಗೆ ಅಪೇಕ್ಷಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ಬಡಜನರಿಗೆ ವಿತರಿಸಲು ನಿರ್ಧರಿಸಿದರು.
ಸಭೆಯಲ್ಲಿ ಶಾಸಕರ ಜೊತೆ ಕೊಳಚೆ ನಿರ್ಮೂಲ ಮಂಡಳಿ ಆಯುಕ್ತರಾದಂತಹಾ ಶ್ರೀ ರುದ್ರಯ್ಯಾ, ನಗರಸಭೆಯ ಇಂಜಿನಿಯರ್ ಗಣೇಶ್ ಜಿ, ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.