50 ಲಕ್ಷ ಬೀದಿ ವ್ಯಾಪಾರಿಗಳಿಗೆ 5 ಸಾವಿರ ಕೋಟಿ ರೂ.:ನಿರ್ಮಲಾ ಸೀತಾರಾಮನ್
ನವದೆಹಲಿ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರ ₹20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಒದಗಿಸುವುದಾಗಿ ಪ್ರಕಟಿಸಿದ್ದು, ನಿರ್ಮಲಾ ಸೀತಾರಾಮನ್ ಬುಧವಾರದಿಂದ ಆರ್ಥಿಕ ಪ್ಯಾಕೇಜ್‌ಗಳ ಘೋಷಣೆ ಮಾಡುತ್ತಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ, ಎಂಎಸ್‌ಎಂಇಗಳ ಚೇತರಿಕೆ, ಪಿಎಫ್ ಹಾಗೂ ತೆರಿಗೆ ಪಾವತಿದಾರರಿಗೆ ವಿನಾಯಿತಿ ಸೇರಿದಂತೆ ಹಲವು ವಲಯಗಳಿಗಾಗಿ ₹6 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರು. ಇಂದು ರೈತರು ಹಾಗೂ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಪರಿಹಾರ ಪ್ಯಾಕೇಜ್ ಪ್ರಕಟಿಸಿದ್ದಾರೆ. 1.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ₹182ರಿಂದ ₹202 ಹೆಚ್ಚಳ ಮಾಡಲಾಗಿದೆ. 2.ರೇಷನ್ ಕಾರ್ಡ್ ಹೊಂದಿರದ ವಲಸೆ ಕಾರ್ಮಿಕರಿಗೆ 5 ಕೆ.ಜಿ ಅಕ್ಕಿ ಅಥವಾ ಗೋದಿ ಹಾಗೂ 1 ಕೆ.ಜಿ. ಬೇಳೆ–ಕಾಳು ಸಿಗಲಿದೆ. ರಾಜ್ಯ ಸರ್ಕಾರಗಳು ಇದರ ಕಡೆಗೆ ಗಮನ ಹರಿಸಲಿದೆ. ವಲಸೆ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಆಹಾರ ಪದಾರ್ಥಗಳು ತಲುಪಿಸುವ ಜವಾಬ್ದಾರಿ ವಹಿಸಲಿವೆ. ಸುಮಾರು 8 ಕೋಟಿ ವಲಸೆ ಕಾರ್ಮಿಕರಿದ್ದಾರೆ. 3. ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್: ಇರುವ ರೇಷನ್ ಕಾರ್ಡ್ ಬಳಸಿ ದೇಶದ ಯಾವುದೇ ಭಾಗದಲ್ಲಿ ಬಳಸಬಹುದು. ಅದರಿಂದ ಆಹಾರ ಪದಾರ್ಥಗಳನ್ನು ಪಡೆಯಬಹುದು. 2020ರ ಆಗಸ್ಟ್ ಹೊತ್ತಿಗೆ ಶೇ 83ರಷ್ಟು ರೇಷನ್ ಕಾರ್ಡ್‌ಗಳು ಅನ್ವಯಗೊಳ್ಳಲಿವೆ. ಶೇ 100ರಷ್ಟು ಮಾರ್ಚ್ 2021ಕ್ಕೆ ಪೂರ್ಣಗೊಳ್ಳಲಿದೆ. 4. ಮುಂದಿನ 1 ತಿಂಗಳ ಒಳಗಡೆ ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ನೀಡಲು ವಿಶೇಷ ಯೋಜನೆಯನ್ನು ತರಲಾಗುವುದು. 10 ಸಾವಿರ ರೂ. ಬಂಡವಾಳ ಇರುವ ಬೀದಿ ಬದಿಯ ವ್ಯಾಪಾರಿಗಳಿಗೆ ಇದು ನೆರವು ನೀಡಲಿದೆ. ಒಟ್ಟಿ 50 ಲಕ್ಷ ಬೀದಿ ವ್ಯಾಪಾರಿಗಳಿಗೆ ನೆರವು ನೀಡಲು 5 ಸಾವಿರ ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. |