ಜಿಲ್ಲಾ ಆಸ್ಪತ್ರೆಗೆ 5 ಡಯಾಲಿಸಿಸ್ ಯಂತ್ರ:ಶ್ರೀರಾಮುಲು
ಉಡುಪಿ: ಜಿಲ್ಲಾ ಆಸ್ಪತ್ರೆಗೆ 5 ಡಯಾಲಿಸಿಸ್ ಯಂತ್ರ, ಎಂಆರ್‌ಐ ಕೇಂದ್ರದ ಸೌಲಭ್ಯ ನೀಡಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದರು.ಶನಿವಾರ ಜಿಲ್ಲಾ ಆಸ್ಪತ್ರೆಯಲ್ಲಿ ಶಾಸಕರು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ 10 ಡಯಾಲಿಸಿಸ್ ಯಂತ್ರಗಳಿವೆ. 750 ರಿಂದ 800 ಮಂದಿ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. 38 ಮಂದಿ ಡಯಾಲಿಸಿಸ್‌ಗೆ ಕಾಯುತ್ತಿರುವ ಮಾಹಿತಿ ಇದೆ. ಹಾಗಾಗಿ, ಆಸ್ಪತ್ರೆಗೆ ಅಗತ್ಯವಿರುವ ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗುವುದು. ರಾಷ್ಟ್ರೀಯ ಆರೋಗ್ಯ ಮಿಶನ್ ಅಡಿ ಎಂಆರ್‌ಐ ಸ್ಕಾೃನಿಂಗ್ ಕೇಂದ್ರ ಮಂಜೂರಾಗಿದ್ದು, ಶೀಘ್ರ ಸ್ಥಾಪನೆಯಾಗಲಿದೆ ಎಂದರು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿರುವ ಕಠಿಣ ನಿಯಮಗಳಿಂದ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಸಮಸ್ಯೆಯಾಗಿದೆ. ಗಂಭೀರ ಖಾಯಿಲೆಗಳಿಗೆ ಇರುವ ನಿಯಮಗಳನ್ನು ಸರಳಗೊಳಿಸಬೇಕು, ಮಾರ್ಗಸೂಚಿಗಳನ್ನು ಬದಲಿಸಬೇಕು ಎಂದು ಶಾಸಕ ರಘುಪತಿ ಭಟ್ ಸಭೆಯಲ್ಲಿ ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಆರೋಗ್ಯ ಸಚಿವರು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಮಸ್ಯೆಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯು 250 ಬೆಡ್‌ಗಳಿಗೆ ಮೇಲ್ದರ್ಜೆಗೇರಿದರೆ ಜಿಲ್ಲಾ ಆಸ್ಪತ್ರೆಗೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಲಭ್ಯವಾಗಲಿವೆ. ನಾಗರಿಕ ಸೌಲಭ್ಯ ಸಂಕೀರ್ಣ ಸ್ಥಾಪನೆಗೆ ₹ 25 ಲಕ್ಷ ಅನುದಾನ ನೀಡುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದರು. ಸಂಜೆ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸ್ಮಾರಕ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಪರಿಶೀಲಿಸಿದರು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ವೈದ್ಯರು ಮತ್ತು ಸಿಬ್ಬಂದಿಯ ಜೊತೆಗೆ ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ಒಳಗೊಂಡ ಘಟಕ ಕಾರ್ಯ ನಿರ್ವಹಿಸಲು ಅನುಮತಿ ನೀಡಬೇಕು ಎಂದು ಶಾಸಕ ರಘುಪತ ಭಟ್ ವಿಷಯ ಪ್ರಸ್ತಾಪಿಸಿದರು. ಈ ವಿಷಯವಾಗಿ ಇಲಾಖೆಯ ಕಾರ್ಯದರ್ಶಿ ಜತೆ ಚರ್ಚಿಸಿ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುುದು ಎಂದು ಸಚಿವರು ಹೇಳಿದರು. ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್, ಡಿಎಚ್‌ಒ ಅಶೋಕ್, ಸರ್ಜನ್ ಮದುಸೂದನ್ ನಾಯಕ್ ಸಭೆಯಲ್ಲಿದ್ದರು. |