ಒಳಚರಂಡಿ ಸಮಸ್ಯೆ ಉಡುಪಿಯ 400 ಬಾವಿಗಳು ಕಲುಷಿತ: ಡಾ.ಪ್ರಕಾಶ್‌ ಕಣಿವೆ

ಉಡುಪಿ: ಪರಿಸರ ಮಾಲಿನ್ಯದಲ್ಲಿ ತಾರತಮ್ಯವಿಲ್ಲ ಪರಿಸರ ಮಾಲಿನ್ಯದ ಕೆಡುಕಗಳಿಗೆ ತಾರತಮ್ಯ ಇಲ್ಲ. ಇದು ಶ್ರೀಮಂತರು ಹಾಗೂ ಬಡವರಿಗೆ ಸಮಾನವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಒಳಚರಂಡಿ ಸಮಸ್ಯೆಯಿಂದ ನಗರವ್ಯಾಪ್ತಿಯ 300ರಿಂದ 400 ಬಾವಿಗಳು ಕಲುಷಿತಗೊಂಡಿದೆ. ಹಾಗಾಗಿ ಜನರು ಪರಿಸರ ಸ್ವಚ್ಛತೆ, ತ್ಯಾಜ್ಯ
ನಿರ್ವಹಣೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಪ್ರಕೃತಿ ಸಂಪತ್ತನ್ನು ಉಳಿಸಿ ಬೆಳೆಸಿ
ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್‌ ಕಣಿವೆ ಹೇಳಿದರು.

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದ್ದು, ಆ ಮೂಲಕ ಸರ್ಕಾರ ಮುಂದಿನ ಪೀಳಿಗೆಯ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಹೇಳಿದರು. ಎಸ್‌ಐಓ ಉಡುಪಿ, ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಹಾಗೂ ಸಂವೇದನಾ ಆರ್ಟ್‌ ಅಂಡ್‌ ಕಲ್ಚರ್ ಕರ್ನಾಟಕ ಇದರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಪರಿಸರ ಸಂರಕ್ಷಣೆ ಅಭಿಯಾನಕ್ಕೆ ಶನಿವಾರ ಮಣಿಪಾಲದ ಟ್ಯಾಪ್ಮಿಯ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ಚಾಲನೆ ನೀಡಿ ಮಾತನಾಡಿದರು.


ಪರಿಸರಕ್ಕೆ ಮಾಡಿದ ತೊಂದರೆಯಿಂದ ಕಳೆದ ಬಾರಿ ಕೊಡಗು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿತು. ಇದೆಲ್ಲ ಮಾನವ ನಿರ್ಮಿತ ದುರಂತಗಳಾಗಿವೆ. ನಾವು ಪರಿಸರಕ್ಕೆ ತೊಂದರೆ ಮಾಡಿದರೆ ಮುಂದೆ ಅವು ನಮಗೆ ತೊಂದರೆಯನ್ನು ಉಂಟು ಮಾಡುತ್ತದೆ. ಈ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಪೀಳಿಗೆ ಬಹಳಷ್ಟು ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದರು. ಬ್ರಹ್ಮಾವರದಲ್ಲಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಒಂದು ಸಾವಿರಕ್ಕೂ ಅಽಧಿಕ ಮರಗಳ ಮಾರಣಹೋಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

ಇದರ ವಿರುದ್ಧ ಈಗಾಗಲೇ ಕುಂದಾಪುರ ಅರಣ್ಯ ಉಪಸಂರಕ್ಷಣಾಽಧಿಕಾರಿಯವರಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸಾರ್ವಜನಿಕರು ಪತ್ರ ಚಳುವಳಿಯ ಮೂಲಕ ಸರ್ಕಾರವನ್ನು ಎಚ್ಚರಗೊಳಿಸುವ ಕಾರ್ಯ ಮಾಡಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುವುದು ಸರಿಯಲ್ಲ ಎಂದು ಹೇಳಿದರು.
ಉಡುಪಿ ವಲಯ ಅರಣ್ಯಾಧಿಕಾರಿ ಜೆ. ಕ್ಲಿಫರ್ಡ್‌ ಲೋಬೊ, ಪರಿಸರವಾದಿ ಪ್ರೇಮಾನಂದ
ಕಲ್ಮಾಡಿ, ಎಸ್‌ಐಒ ರಾಜ್ಯಾಧ್ಯಕ್ಷ ನಿಹಾಲ್‌ ಕಿದಿಯೂರು, ಕಾರ್ಯದರ್ಶಿ ಯಾಸಿನ್‌
ಕೋಡಿಬೆಂಗ್ರೆ, ಜಿಲ್ಲಾಧ್ಯಕ್ಷ ಅಫ್ವಾನ್‌ ಹೂಡೆ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ದಾನಿಶ್‌ ಚೆಂಡಾಡಿ ಸಂಪಾದಿತ ‘ಪಚ್ಚೆ ಗುರುತು’ ಕೃತಿ
ಬಿಡುಗಡೆಗೊಳಿಸಲಾಯಿತು. ಸಂವೇದನಾ ಆರ್ಟ್‌ ಅಂಡ್‌ ಕಲ್ಚರ್‌ ಕಾರ್ಯದರ್ಶಿ ದಾನಿಶ್‌
ಚೆಂಡಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಾನದ ಸಂಚಾಲಕ ನಾಸೀರ್‌ ಹೂಡೆ ವಂದಿಸಿದರು. ಕಾರ್ಯದರ್ಶಿ ಶಾರೂಕ್‌ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!