ಬಿಜೆಪಿಗೆ ಪಂಚಾಯತ್ ಚುನಾವಣೆ ಎದುರಿಸಲು ಯಾವುದೇ ನೈತಿಕತೆಯಿಲ್ಲ: ವಿನಯ್ ಕುಮಾರ್ ಸೊರಕೆ

ಕಾಪು: ಮೊದಲಿನಿಂದಲೂ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಪಂಚಾಯತ್ ಮೀಸಲಾತಿ ವ್ಯವಸ್ಥೆ ಬಗ್ಗೆ ಆಕ್ಷೇಪ ಮತ್ತು ವಿರೋಧ ವ್ಯಕ್ತಪಡಿಸುತ್ತಲೇ ಬರುತ್ತಿರುವ ಬಿಜೆಪಿಗೆ ಗ್ರಾಮ ಪಂಚಾಯತ್ ಚುನಾವಣೆ ಎದುರಿಸಲು ಯಾವುದೇ ನೈತಿಕತೆಯಿಲ್ಲ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
 
ಕಾಪು ಪ್ರೆಸ್ ಕ್ಲಬ್ ನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಮೊದಲಿನಿಂದಲೂ ಈ ವ್ಯವಸ್ಥೆ ಯನ್ನು ವಿರೋಧಿಸುತ್ತಾ ಬಂದಿದೆ. ಆದರೆ ಈಗ  ಚುನಾವಣೆ ನಡೆಯುವ ಮೊದಲೆ ನಾವೇ ಗೆಲ್ಲುತ್ತೇವೆ ಎನ್ನುವ ಮೂಲಕ ಮತದಾನದ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ. ಕಾಪು ಕ್ಷೇತ್ರದ 26 ಗ್ರಾಮ ಪಂಚಾಯತ್‌ಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ಮತದಾರರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂದರು.

ಈ ವೇಳೆ ಚುನಾವಣಾ ಪ್ರಚಾರದಲ್ಲಿ ರಾಜಕೀಯ ಪಕ್ಷಗಳು ಭಾಗಿಯಾಗಿರುವ ಕುರಿತು ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಯು ಪಕ್ಷ ಮತ್ತು ಪಕ್ಷದ ಚಿಹ್ನೆ ರಹಿತವಾಗಿ ನಡೆಯುವ ಚುನಾವಣೆಯಾದರೂ , ಬಿಜೆಪಿ ಕೆಲವೆಡೆ ಅಧಿಕಾರಿಗಳನ್ನು ಉಪಯೋಗಿಸಿಕೊಂಡು ಚುನಾವಣಾ ಅಕ್ರಮಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತಾಗಿ ಮಾತು ಮುಂದುವರೆಸಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದ್ದು ಅವಶ್ಯಕತೆ ಬಿದ್ದರೆ ನ್ಯಾಯಾಲಯಕ್ಕೂ ಹೋಗುತ್ತೇವೆ. ಪಕ್ಷದ ಚಿಹ್ನೆ ರಹಿತವಾಗಿ ನಡೆಯುವ ಚುನಾವಣೆ ಇದಾದರೂ ಬಿಜೆಪಿಯು ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಗ್ರಾಮಸ್ವರಾಜ್ ವ್ಯವಸ್ಥೆಗೆ ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸುತ್ತಿದೆ ಎಂದರು.

 ಈ ಭಾರಿ ಮತದಾರರ ವಲವು ಕಾಂಗ್ರೆಸ್ ಕಡೆ ಇದೆ ಎಂದ ಅವರು,  ಕೇಂದ್ರ ಮತ್ತು ರಾಜ್ಯ ಹಾಗೂ ಉಡುಪಿ ಜಿಲ್ಲೆಯಲ್ಲಿ  ಬಿಜೆಪಿ ಆಡಳಿತವಿದ್ದರೂ ಅಭಿವೃದ್ಧಿ ಮಾತ್ರ ಕುಂಠಿತವಾಗಿದೆ. ಕೋವಿಡ್ ನಿಯಂತ್ರಣಕ್ಕೆ ತರುವಲ್ಲಿ ಕೇಂದ್ರ – ರಾಜ್ಯಗಳು ವಿಫಲವಾಗಿವೆ. ಭೂ ಮಸೂದೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ಸಹಿತವಾಗಿ ಡಿಸೇಲ್, ಪೆಟ್ರೋಲಿಯಂ, ಗ್ಯಾಸ್ ಬೆಲೆ ಏರಿಕೆ, ವಿದ್ಯುತ್ ಬಿಲ್, ನೀರಿನ ತೆರಿಗೆ, ತೆರಿಗೆ ಏರಿಕೆ ವಿಷಯಗಳಿಗೆ ಜನ ಸರಕಾರದ ಬಗ್ಗೆ ಬೇಸರಗೊಂಡಿದ್ದು, ಈ ಬಾರಿ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕಾಂಗ್ರೆಸ್ ಉಸ್ತುವಾರಿ ಅಣ್ಣಯ್ಯ ಶೇರಿಗಾರ್, ಕೆಪಿಸಿಸಿ ಕೋ. ಆರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಯುವ ಕಾಂಗ್ರೆಸ್ ಉಸ್ತುವಾರಿ ಅಖಿಲೇಶ್ ಕೋಟ್ಯಾನ್, ಉಡುಪಿ ಜಿ.ಪಂ. ಸದಸ್ಯ ವಿಲ್ಸನ್ ರೋಡ್ರಿಗಸ್, ತಾ.ಪಂ. ಉಪಾಧ್ಯಕ್ಷ ಯು.ಸಿ. ಶೇಖಬ್ಬ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!