ನಾಲ್ಕು ಗಂಟೆಯಲ್ಲಿ ಬಾಚಿದ್ದು ಎಷ್ಟು ಕೋಟಿ ಗೊತ್ತಾ?
ಬೆಂಗಳೂರು: ಕಳೆದ 41 ದಿನಗಳಿಂದ ಮದ್ಯ ಸಿಗದೆ ಕಂಗಾಲಾಗಿದ್ದ ಮದ್ಯ ಪ್ರಿಯರಿಗೆ ಲಾಕ್‍ಡಾನ್ ಸಡಿಲಿಕೆಯಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮದ್ಯ ಲಭ್ಯವಾಗಿದೆ. ರಾಜ್ಯಾದ್ಯಂತ ಒಂದೇ ದಿನ ಇಂದು 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ರಾಜ್ಯದ ಎಲ್ಲ ಕಡೆ ಮದ್ಯದಂಗಡಿಗಳು ತೆರೆದಿದ್ದವು. ಪರಿಣಾಮ ಬಹುತೇಕ ಮದ್ಯದಂಗಡಿಗಳಲ್ಲಿದ್ದ ದಾಸ್ತಾನು ಖಾಲಿಯಾಗಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 60 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಆಗುತ್ತಿತ್ತು.
ಬಹು ದಿನಗಳ ಬಳಿಕ ಮತ್ತೆ ವಹಿವಾಟು ಆರಂಭವಾದ ಕಾರಣ ನಿರೀಕ್ಷೆಯಂತೆಯೇ ಇಂದು ಮದ್ಯ ಮಾರಾಟ ಹೆಚ್ಚಳವಾಗಿದೆ. ಇಂದು ಒಟ್ಟಾರೆ 4 ಲಕ್ಷ ಲೀಟರ್ ಬಿಯರ್ ಹಾಗೂ 8.6 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟವಾಗಿದೆ. ಸರ್ಕಾರ ಹಲವು ಷರತ್ತುಗಳ ಅನ್ವಯ ಇಂದು ಮದ್ಯದಂಗಡಿ ತೆರಯಲು ಅನುಮತಿ ನೀಡಿತ್ತು. ಮೊದಲ ದಿನವಾದ ಕಾರಣ ಬಹುತೇಕ ಭಾಗಗಳಲ್ಲಿ ಮದ್ಯದಂಗಡಿಗಳ ಎದುರು ದೂರದವರೆಗೆ ಸಾಲು ಕಂಡು ಬಂದಿತ್ತು.
ಹಲವು ಸ್ಥಳಗಳಲ್ಲಿ ಸಾಮಾಜಿಕ ಅಂತರ ಮರೆತು ಮದ್ಯದಂಗಡಿಗಳ ಎದುರು ಜನರು ಸೇರಿದ್ದರು. ಈ ಕುರಿತು ಕ್ರಮಕೈಗೊಳ್ಳುವ ಕುರಿತು ಇಲಾಖೆ ತಿಳಿಸಿದೆ. ಅಲ್ಲದೇ ಎಂ.ಆರ್.ಪಿ ಬೆಲೆಯನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಕೆಲವು ದೂರುಗಳು ಬಂದರೆ ಪರಿಶೀಲನೆ ನಡೆಸಿ ಕಾನೂನಿ ಅನ್ವಯ ಅಮಾನತು ಮಾಡುವ ಕುರಿತು ಕ್ರಮಕೈಗೊಳ್ಳಲಾಗಿದೆ.