20 ಲಕ್ಷ ಕೋಟಿ ರೂ.ಪ್ಯಾಕೇಜ್: ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ.ಸಾಲ: ನಿರ್ಮಲಾ ಸೀತಾರಾಮನ್
ನವದೆಹಲಿ: 25 ರಿಂದ 100 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಹೇಳಿದ್ದಾರೆ.
ಕೊವಿಡ್-19 ಸೋಂಕು ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಘೋಷಿಸಿದ ವಿಶೇಷ ಪ್ಯಾಕೇಜ್ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾಮನ್ ಅವರು ಇಂದು ಸಣ್ಣ, ಅತಿಸಣ್ಣ ಉದ್ಯಮಗಳು ಹಾಗೂ ಮತ್ತಿತರ ವಲಯಗಳ ಕಾರ್ಯ ಯೋಜನೆಗಳನ್ನು ಪ್ರಕಟಿಸಿದರು.
ಪ್ರಧಾನಿ ಮೋದಿ ಘೋಷಣೆ ಹಿನ್ನೆಲೆಯಲ್ಲಿ ಅವರು, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ-ಎಂಎಸ್‌ಎಂಇ ಉದ್ಯಮಗಳಿಗೆ ಯಾವುದೇ ಅಡಮಾನವಿಲ್ಲದೇ ಸ್ವಯಂಚಾಲಿತ ಸಾಲ ಸೌಲಭ್ಯ ಒದಗಿಸಲು ೩ ಲಕ್ಷ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಎಂಎಸ್‌ಎಂಇ ಸೇರಿದಂತೆ ಉದ್ಯಮ ವಲಯಕ್ಕೆ ಹಲವು ವಿನಾಯಿತಿಗಳೊಂದಿಗೆ ತುರ್ತು ಸಾಲ ನೀಡಲಾಗುವುದು; ಸಾಲಮರುಪಾವತಿಗೆ ೪ ವರ್ಷ ಕಾಲಾವಕಾಶ ನೀಡಲಾಗಿದ್ದು, ಮೊದಲ 12 ತಿಂಗಳ ಅವಧಿಯಲ್ಲಿ ಸಾಲ ಮರುಪಾವತಿಗೆ ವಿನಾಯಿತಿ ನೀಡಲಾಗಿದೆ ಎಂದರು.
ಸಂಕಷ್ಟದಲ್ಲಿರುವ ಎಂಎಸ್‌ಎಂಇಗಳಿಗಾಗಿ 20 ಸಾವಿರ ಕೋಟಿ ರೂಪಾಯಿ ಸಾಲಸೌಲಭ್ಯ ನಿಗದಿಪಡಿಸಲಾಗಿದ್ದು, ಇದರಿಂದ ಸುಮಾರು 2 ಲಕ್ಷ ಎಂಎಸ್‌ಎಂಇ ಘಟಕಗಳು ಲಾಭ ಪಡೆಯಲಿವೆ ; ಅಭಿವೃದ್ಧಿ ಸಾಮರ್ಥ್ಯ ಇರುವ ಎಂಎಸ್‌ಎಂಇಗಳಿಗೆ 50 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿಶೇಷ ಪ್ಯಾಕೇಜ್‌ನ ಲಾಭವನ್ನು ಎಲ್ಲಾ ಎಂಎಸ್‌ಎಂಇಗಳಿಗೆ ದೊರಕಿಸಲು ಎಂಎಸ್‌ಎಂಇ ವ್ಯಾಖ್ಯಾನವನ್ನು ಪುನರ್ ರಚಿಸಲಾಗುವುದು. ಬಂಡವಾಳ ಹೂಡಿಕೆ ಮಿತಿಯನ್ನು ಸಹ ಪರಾಮರ್ಶಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಉದ್ಯಮಗಳ ವಹಿವಾಟಿಗೆ ಹೆಚ್ಚುವರಿ ಮಾನದಂಡ ನಿಗದಿಪಡಿಸಲಾಗುವುದು ಅಲ್ಲದೆ ತಯಾರಿಕಾ ಮತ್ತು ಸೇವಾ ವಲಯದ ವ್ಯತ್ಯಾಸವನ್ನು ತೆಗೆದುಹಾಕಲಾಗುವುದು. ಎಂಎಸ್‌ಎಂಇಗಳ ಉತ್ತೇಜನಕ್ಕಾಗಿ ಅಗತ್ಯ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಾಗತಿಕ ಕಂಪನಿಗಳ ಸ್ಪರ್ಧೆ ತಪ್ಪಿಸಲು ಸರ್ಕಾರಿ ವಲಯದಲ್ಲಿ 200 ಕೋಟಿ ರೂಪಾಯಿ ವರೆಗಿನ ಖರೀದಿಗೆ ಜಾಗತಿಕ ಟೆಂಡರ್ ರದ್ದುಪಡಿಸಲಾಗುವುದು. ಇದಕ್ಕಾಗಿ ಹಣಕಾಸು ಕಾನೂನುಗಳಿಗೆ ಅಗತ್ಯ ತಿದ್ದುಪಡಿ ಮಾಡಲಾಗುವುದು. ಸ್ವಾವಲಂಬಿ ಭಾರತ ಮತ್ತು ಮೇಕಿಂಗ್ ಇಂಡಿಯಾ ಯೋಜನೆಗಳಿಗೆ ಇದರಿಂದ ನೆರವಾಗಲಿದೆ ಎಂದು ಅವರು ತಿಳಿಸಿದರು.
ಎಂಎಸ್‌ಎಂಇ ವಲಯಗಳಿಗೆ ಸಾಲಸೌಲಭ್ಯ ಒದಗಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಬ್ಯಾಂಕ್‌ಗಳು ಮತ್ತು ಹಣಕಾಸು ನಿಗಮಗಳಿಗೆ 45 ಸಾವಿರ ಕೋಟಿ ರೂಪಾಯಿ ಸಾಲ ಖಾತರಿ ಯೋಜನೆ ಜಾರಿಗೊಳಿಸಲಾಗುವುದು. ಸಾಲ ಮೊತ್ತದ ಪ್ರಥಮ ಶೇಕಡ 20ರಷ್ಟು ನಷ್ಟವನ್ನು ಖಾತರಿದಾರನಾದ ಕೇಂದ್ರ ಸರ್ಕಾರ ಭರಿಸಲಿದೆ ; ಸಣ್ಣ ಪ್ರಮಾಣದ ಸಾಲ ನೀಡುವ ಬ್ಯಾಂಕೇತರ ಸಂಸ್ಥೆಗಳಿಗೆ 30 ಸಾವಿರ ಕೋಟಿ ರೂಪಾಯಿ ನೆರವು ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ಸುಮಾರು72.5 ಲಕ್ಷ ಕಾರ್ಮಿಕರಿಗೆ ಜೂನ್‌ನಿಂದ ಆಗಸ್ಟ್‌ವರೆಗಿನ 3 ತಿಂಗಳ ಭವಿಷ್ಯನಿಧಿಯನ್ನು ಕೇಂದ್ರ ಸರ್ಕಾರವೇ ಪಾವತಿಸಲಿದೆ. ಗರಿಷ್ಠ 15 ಸಾವಿರ ರೂಪಾಯಿ ಮಾಸಿಕ ವೇತನ ಹೊಂದಿರುವ ನೌಕರರಿಗೆ ತಕ್ಷಣವೇ ಭವಿಷ್ಯನಿಧಿ ಪಾವತಿಸಲಾಗುವುದು. ಭವಿಷ್ಯನಿಧಿಯಲ್ಲಿ ಉದ್ಯೋಗದಾತರ ಪಾಲನ್ನು ಶೇಕಡ12 ರಿಂದ ಶೇಕಡ 10ಕ್ಕೆ ಇಳಿಸಲಾಗುವುದು ಎಂದರು.
ಸಂಕಷ್ಟಕ್ಕೆ ಸಿಲುಕಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರ ಕೋಟಿ ರೂಪಾಯಿ ನೆರವು ನಿಗದಿಪಡಿಸಲಾಗಿದ್ದು, ಕೇಂದ್ರದ ಸೌಲಭ್ಯಗಳನ್ನು ಗ್ರಾಹಕರಿಗೆ ತಲುಪಿಸುವ ವಿದ್ಯುತ್ ಕಂಪನಿಗಳಿಗೆ ರಿಯಾಯಿತಿ ನೀಡಲಾಗುವುದು.
ಸರ್ಕಾರಿ ನಿರ್ಮಾಣ ಕಾಮಗಾರಿಗಳ ಗುತ್ತಿಗೆದಾರರ ಅವಧಿಯನ್ನು6 ತಿಂಗಳು ವಿಸ್ತರಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ಇನ್ನು 3ತಿಂಗಳು ಹೆಚ್ಚುವರಿ ವಿಸ್ತರಣೆಗೆ ಅವಕಾಶ ನೀಡಲಾಗಿದೆ. ಬಿಲ್ಡರ್ ಮತ್ತು ಡೆವಲಪರ್‌ಗಳಿಗೆ ಅನುಕೂಲವಾಗುವಂತೆ ಕಾಮಗಾರಿ ನೋಂದಣಿ ಪ್ರಮಾಣ ಪತ್ರಗಳನ್ನು ಹೊಸದಾಗಿ ನೀಡಲಾಗುವುದು.
2019-20ರ ಹಣಕಾಸು ವರ್ಷದ ಆದಾಯ ತೆರಿಗೆ ಮರುಸಲ್ಲಿಕೆ ಕಾಲಮಿತಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಟಿಡಿಎಸ್ ಮತ್ತು ಟಿಸಿಎಸ್ ಕಡಿತ ಪ್ರಮಾಣದಲ್ಲಿ ಶೇಕಡ 25ರಷ್ಟು ರಿಯಾಯಿತಿ ನೀಡಲಾಗಿದೆ. ಈ ರಿಯಾಯಿತಿ ನಾಳೆಯಿಂದ2021ರ ಮಾರ್ಚ್ 31ರವರೆಗೆ ಅನ್ವಯವಾಗಲಿದೆ ಎಂದು ಅವರು ವಿವರಿಸಿದರು.