ಇರಾನ್ ನಲ್ಲಿ ವಿಮಾನ ಅಪಘಾತ – 180 ಮಂದಿ ಸಾವು

ಉಕ್ರೇನ್: ಇರಾನ್ ರಾಜಧಾನಿ ಟೆಹರಾನ್‌ನಿಂದ ಉಕ್ರೇನ್‌ನ ಕೀವ್‌ಗೆ ಹೊರಟಿದ್ದ ಉಕ್ರೇನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನ ಪತನಗೊಂಡು, ಅದರಲ್ಲಿದ್ದ ಎಲ್ಲ 168 ಪ್ರಯಾಣಿಕರು ಮತ್ತು 9 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದ್ಯ್ಮಿರ್ ಝಿಲೆಂಸ್ಕಿ ಪ್ರಕಟಿಸಿದ್ದಾರೆ.

ವಿಮಾನ ದುರಂತ ಕುರಿತು ತಮ್ಮ ಫೇಸ್‌ಬುಕ್ ಪುಟದಲ್ಲಿ ಹೇಳಿಕೆ ದಾಖಲಿಸಿರುವ ಝಿಲೆಂಸ್ಕಿ, ‘ಪ್ರಾಥಮಿಕ ವರದಿಗಳ ಪ್ರಕಾರ ಎಲ್ಲ ಪ್ರಯಾಣಿಕರು ಮತ್ತು ವೈಮಾನಿಕ ಸಿಬ್ಬಂದಿ ಅಸುನೀಗಿದ್ದಾರೆ. ಮೃತರಿಗೆ ಸಂತಾಪಗಳು. ಇರಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಸಿಬ್ಬಂದಿ ದುರಂತದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತರ ಹೆಸರುಗಳನ್ನು ಪಟ್ಟಿ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಟೆಹರಾನ್‌ ವಿಮಾನ ನಿಲ್ದಾಣದಿಂದ ಬುಧವಾರ ನಸುಕಿನಲ್ಲಿ ಟೇಕ್‌ಆಫ್ ಆಗಿದ್ದ ವಿಮಾನವು ಕೀವ್‌ಗೆ ಬೆಳಿಗ್ಗೆ 8ಕ್ಕೆ ಲ್ಯಾಂಡ್ ಆಗಬೇಕಿತ್ತು. ‘ತಾಂತ್ರಿಕ ಕಾರಣಗಳಿಂದ ವಿಮಾನ ಪತನಗೊಂಡಿರಬಹುದು’ ಎಂದು ಟೆಹರಾನ್‌ನ ಇಮಾಂ ಖಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ಅಲಿ ಖಶಾನಿ ಪ್ರತಿಕ್ರಿಯಿಸಿದ್ದಾರೆ.

ಕಾರಣ ಸ್ಪಷ್ಟವಾಗಿಲ್ಲ – ಉಕ್ರೇನ್ ರಾಜಧಾನಿ ಕೀವ್‌ಗೆ ಹೊರಟಿದ್ದ ವಿಮಾನದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿ 180 ಮಂದಿ ಇದ್ದರು. ಈ ವಿಮಾನ ಸ್ಫೋಟಗೊಳ್ಳುವುದಕ್ಕೂ, ಅಮೆರಿಕ–ಇರಾನ್‌ ಸಂಘರ್ಷಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

‘180 ಪ್ರಯಾಣಿಕರೊಂದಿಗೆ ಹಾರಾಟ ಆರಂಭಿಸಿದ್ದ ಉಕ್ರೇನ್‌ ಏರ್‌ಲೈನ್‌ನ ವಿಮಾನ ಬೆಂಕಿಯುಂಡೆಯಂತೆ ಉರಿದು ಉರುಳಿತು’ ಎಂದು ಬಿಬಿಸಿಯ ಇರಾನ್ ವರದಿಗಾರ ಬಹ್ಮನ್ ಕಲ್ಬಾಸಿ ವಿಡಿಯೊ ಒಂದನ್ನು ಟ್ವೀಟ್ ಮಾಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!