ಯಕ್ಷಗಾನ ಕಲಾರಂಗದ 17ನೇ ಮನೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗ ನವೆಂಬರ್ 2 ರಂದು ಉದ್ಯಾವರದಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿಗೆ ಸುಮಾರು 5ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆಯನ್ನು ಬೆಂಗಳೂರಿನ ಟೆಕ್ಸೆಲ್ ಅಟೋಮೋಶನ್ ಪ್ರೆ ಲಿ. ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಹರೀಶ್ ರಾಯಸ್‌ರವರು ನೆರವೇರಿಸಿದರು. ಆರಂಭದಲ್ಲಿ ಸ್ವಾಗತಿಸಿದ ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಇದು ಸಂಸ್ಥೆಯ 17ನೇ ಮನೆಯಾಗಿದ್ದು, ಹರೀಶ್ ರಾಯಸ್‌ರವರನ್ನು ಅಭಿನಂದಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾರ್ಯದರ್ಶಿ ಮುರಲಿ ಕಡೆಕಾರ್ ಹರೀಶ್ ರಾಯಸ್ ರವರು ಕಳೆದ ಐದು ವರ್ಷಗಳಿಂದ ವಿದ್ಯಾಪೋಷಕ್‌ಗೆ ದೊಡ್ಡ ಮೊತ್ತದ ಆರ್ಥಿಕ ನೆರವು ನೀಡುತ್ತಾ ಬಂದಿದ್ದು, ಸ್ವತಹ ಆಸಕ್ತಿ ತೋರಿ ಮನೆಯ ನಿರ್ಮಾಣದ ವೆಚ್ಚ ಭರಿಸಿದ್ದಾರೆ. ಇದು ಸಂಸ್ಥೆ ಸಮಾಜದಲ್ಲಿ ಹೊಂದಿದ ಸದಭಿಪ್ರಾಯದ ದ್ಯೋತಕ ಎಂದು ನುಡಿದರು.

ಜ್ಯೋತಿ ಬೆಳಗಿಸಿ ಮನೆ ಉದ್ಘಾಟಿಸಿದ ಹರೀಶ್ ರಾಯಸ್ ಇಷ್ಟೊಂದು ಕಡಿಮೆ ಖರ್ಚಿನಲ್ಲಿ ಸುಂದರವಾದ ಮನೆ ನಿರ್ಮಿಸಿದ ಸಂಸ್ಥೆಯನ್ನು ಅಭಿನಂದಿಸಿ, ಮುಂದೆಯೂ ತಾನು ನಿಮ್ಮೊಂದಿಗಿದ್ದೇನೆಂದು ಹರ್ಷವ್ಯಕ್ತಪಡಿಸಿದರು. ಅಂತಿಮ ವರ್ಷದ ಬಿ.ಸಿ.ಎ ವಿದ್ಯಾರ್ಜನೆಗೈಯುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿ ವಿಶ್ವನಾಥ ಹಾಗೂ ಆತನ ತಾಯಿ ಮಾಲತಿಯವರು ಧನ್ಯತೆಯ ನುಡಿಯನ್ನಾಡಿ, ಮುಂದೆ ನಾವು ಆರ್ಥಿಕ ಬಲಿಷ್ಠರಾದಾಗ ಹೀಗೆ ಕಷ್ಟದಲ್ಲಿರುವವರಿಗೆ ನೆರವಾಗುತ್ತೇವೆಂದು ಸಂಕಲ್ಪಮಾಡಿದ್ದೇವೆ ಎಂದು ನುಡಿದರು. ಈ ಸಂದರ್ಭದಲ್ಲಿ ರೂಪಾ ಹರೀಶ್ ರಾಯಸ್, ದಾನಿಗಳಾದ ತಲ್ಲೂರು ಶಿವರಾಮ ಶೆಟ್ಟಿ, ಯು. ವಿಶ್ವನಾಥ ಶೆಣೈ, ಸೂರ್ಯಪ್ರಕಾಶ್, ಆನಂದ ಪಿ. ಸುವರ್ಣ, ಮಂಟಪ ನಟರಾಜ್ ಉಪಾಧ್ಯ, ಹುಬ್ಬಳ್ಳಿಯ ಮೈ-ಲೈಫ್‌ನ ಪ್ರವೀಣ್ ಗುಡಿ, ಉಪಾಧ್ಯಕ್ಷ ಎಂ. ಗಂಗಾಧರ ರಾವ್, ಕಡೆಕಾರ್ ಪಂಚಾಯತಿ ಸದಸ್ಯ ರಾಘವೇಂದ್ರ, ನಾರಾಯಣ ಮೇಸ್ತಿç ಹಾಗೂ ಕಲಾರಂಗದ ಕಾರ್ಯಕರ್ತರು ಉಪಸ್ಥಿತರಿದ್ದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಸಿದರು.

Leave a Reply

Your email address will not be published. Required fields are marked *

error: Content is protected !!