ಕೋವಿಡ್ ಹಗರಣ ತನಿಖೆಯಾಗಲಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು: ಆರ್.ಅಶೋಕ್
ಉಡುಪಿ, ಅ.16:ಕೋವಿಡ್ ಸಂಬಂಧ ಅವ್ಯವಹಾರದ ಬಗ್ಗೆ ತನಿಖೆ ಮಾಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಅವರದ್ದೇ ರಾಜ್ಯ ಸರಕಾರ ಇರುವುದರಿಂದ ತನಿಖೆ ಮಾಡುವುದಾದರೇ ಮಾಡಲಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅದಕ್ಕೆ ನಾವು ವಿರೋಧ ಮಾಡಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಉಪಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಮಂಗಳವಾರ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಜನಪ್ರತಿನಿಧಿಗಳ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ರಾಜ್ಯ ಕಾಂಗ್ರೆಸ್ ಸರಕಾರದಿಂದ ಹಗರಣಗಳ ಮೇಲೆ ಹಗರಣ ಬಯಲಿಗೆ ಬರುತ್ತಿದೆ. ಆದುದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಲೇ ಬೇಕಾಗುತ್ತದೆ. ಅಭಿವೃದ್ದಿ ಕಾರ್ಯಗಳಿಗೆ ಹಣ ಕೊಡದ ಈ ಸರಕಾರ ಇದ್ದರೆ ಎಷ್ಟು ಸತ್ತರೆ ಎಷ್ಟು. ರಾಜ್ಯದಲ್ಲಿ ಲೂಟಿಯಲ್ಲಿ ತೊಡಗಿರುವ ಸರಕಾರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಅಭಿವೃದ್ಧಿ ಶೂನ್ಯ ರಾಜ್ಯ ಕಾಂಗ್ರೆಸ್ ಸರಕಾರ, ಅಲ್ಪಸಂಖ್ಯಾತರ ತುಷ್ಠಿಕರಣ ಮಾಡಿಕೊಂಡು ಕಾಲಹರಣ ಮಾಡುತ್ತಿದೆ. ಈ ಸರಕಾರಕ್ಕೆ ಬೆಂಗಳೂರು ನಗರವೇ ರಾಜ್ಯ ಆಗಿದೆ. ಬೇರೆ ಜಿಲ್ಲೆಗಳ ಬಗ್ಗೆ ಇವರಿಗೆ ಆಸಕ್ತಿ ಇಲ್ಲ. ಸಚಿವರು ಯಾವುದೇ ಜಿಲ್ಲೆಗಳತ್ತ ತಲೆ ಹಾಕುತ್ತಿಲ್ಲ ಎಂದು ಟೀಕಿಸಿದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್, ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಯಶ್ಪಾಲ್ ಎ.ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮುಖಂಡರಾದ ಕೆ.ಉದಯಕುಮಾರ್ ಶೆಟ್ಟಿ, ಸುರೇಶ್ ನಾಯಕ್, ರಾಜೇಶ್ ಕಾವೇರಿ, ರೇಷ್ಮಾ ಉದಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕುಂದರ್ ವಂದಿಸಿದರು.