ಜಾತಿ ಧರ್ಮಗಳ ಹೆಸರಿನಲ್ಲಿ ಹಿಂಸಾತ್ಮಕ ಪ್ರವೃತ್ತಿ ಹೆಚ್ಚಾಗುತ್ತಿರುವ ಈ ಸಂದರ್ಭ ಗಾಂಧಿತತ್ವ ಅತ್ಯಂತ ಅವಶ್ಯ- ಡಾ. ಗಣನಾಥ ಎಕ್ಕಾರು

ಉಡುಪಿ, ಅ.2: ಗಾಂಧಿ ಅಧ್ಯಕ್ಷತೆಯಲ್ಲಿ ಜರಗಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನಕ್ಕೆ ನೂರು ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಭಾರತ ಎಂಬ ಕಾರ್ಯಕ್ರಮವನ್ನು ಗಾಂಧಿ ನಡೆಯ ಮೂಲಕ ಬುಧವಾರ ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬನ್ನಂಜೆ ನಾರಾಯಣಗುರು ಸಭಾ ಮಂದಿರದಿಂದ ಆರಂಭಗೊಂಡ ಪಾದ ಯಾತ್ರೆಗೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಚಾಲನೆ ನೀಡಿದರು. ಬಳಿಕ ಸಿಟಿಬಸ್ ನಿಲ್ದಾಣದ ಮೂಲಕ ಸಾಗಿದ ಪಾದಯಾತ್ರೆ ನಗರದ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ವೃತ್ತದಲ್ಲಿ ಸಮಾಪ್ತಿಗೊಂಡಿತು.

ಬಳಿಕ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಚಿಂತಕ ಡಾ.ಗಣನಾಥ ಎಕ್ಕಾರು ಗಾಂಧಿ ಕುರಿತು ವಿಶೇಷ ಉಪನ್ಯಾಸ ನೀಡಿ, ಜಾತಿ, ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆಯುತ್ತ ಹಿಂಸಾತ್ಮಕ ಪ್ರವೃತ್ತಿ ಹೆಚ್ಚಾಗುತ್ತಿರುವು ಈ ಸಂದರ್ಭದಲ್ಲಿ ಗಾಂಧಿ ತತ್ವ ಅತ್ಯಂತ ಮುಖ್ಯವಾಗುತ್ತ ದೆ. ನಾವು ನಮ್ಮ ದೇಶದ ಸ್ವಾತಂತ್ರ್ಯ, ಕಾಂಗ್ರೆಸ್ ಹಾಗೂ ಗಾಂಧಿ ಹೋರಾಟ ಮತ್ತು ಬದುಕನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಇಂದು ನಮ್ಮ ಸಂವಿಧಾನ ಹಾಗೂ ಭಾತೃತ್ವಕ್ಕೆ ಕುತ್ತು ಬಂದಿದೆ. ಈ ಸಂವಿಧಾನವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮಕ್ಕಳ, ಯುವಜನತೆ ಮನಸ್ಸಿಗೆ ಸಂವಿಧಾನದ ಮೌಲ್ಯಗಳನ್ನು ಮನವರಿಕೆ ಮಾಡಿಕೊಡಬೇಕು. ಭಾರತದಲ್ಲಿ ಇಷ್ಟು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿರುವುದಕ್ಕೆ ಗಾಂಧೀಜಿಯಂತ ಮಹಾಪುರುಷರು ಹಾಗೂ ಅಂಬೇಡ್ಕರ್ ರೂಪಿಸಿದ ಸಂವಿಧಾನವೇ ಕಾರಣ. ಆದುದರಿಂದ ಅಂತಹ ಸಂವಿಧಾನವನ್ನು ರಕ್ಷಣೆ ಮಾಡಬೇಕಾದ ಅಗತ್ಯ ಬಹಳ ಇದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಹೆಗ್ಡೆ ಮೊಳವಳ್ಳಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ದಿನಕರ್ ಹೇರೂರು, ಕಾಪು ದಿವಾಕರ್ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಬಿ.ನರಸಿಂಹ ಮೂರ್ತಿ, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಕುಶಲ್ ಶೆಟ್ಟಿ, ಪ್ರಶಾಂತ ಜತ್ತನ್ನ, ಭುಜಂಗ ಶೆಟ್ಟಿ, ರಾಜು ಪೂಜಾರಿ, ಮಂಜುನಾಥ್ ಪೂಜಾರಿ, ಶೇಖ್‌ ವಾಹಿದ್ ಉಡುಪಿ, ಶಂಕರ್ ಕುಂದರ್, ದಿವಾಕರ್ ಕುಂದರ್, ಚಂದ್ರಶೇಖರ್ ಬಾಯರಿ, ನವೀನ್‌ಚಂದ್ರ ಸುವರ್ಣ, ಅರವಿಂದ್ ಪೂಜಾರಿ, ಪ್ರದೀಪ್ ಕುಮಾರ್, ಶಬ್ಬೀರ್ ಅಹ್ಮದ್, ಕಿಶೋರ್ ಕುಮಾರ್ ಎರ್ಮಾಳ್, ಕೀರ್ತಿ ಶೆಟ್ಟಿ, ಜ್ಯೋತಿ ಹೆಬ್ಬಾರ್, ಡಾ.ಸುನಿತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಹರೀಶ್ ಶೆಟ್ಟಿ ಪಾಂಗಾಳ, ಮಹಾಬಲ ಕುಂದರ್, ಇಸ್ಮಾಯಿಲ್ ಅತ್ರಾಡಿ, ಗಣೇಶ್ ನೆರ್ಗಿ, ಬಾಲಕೃಷ್ಣ ಪೂಜಾರಿ, ವೈ.ಸುಕುಮಾರ್, ಶಶಿಧರ್ ಶೆಟ್ಟಿ ಎಲ್ಲೂರು ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಕಿಣಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!