17 ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಸರ್ಕಾರ ರಚನೆ: ರೇಣುಕಾಚಾರ್ಯ

ದಾವಣಗೆರೆ: ದೇಶಕ್ಕೆ ಸ್ವಾತಂತ್ರ್ಯ ಬಂದ ರೀತಿ ಅನರ್ಹ ಶಾಸಕರ ತ್ಯಾಗದಿಂದ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, 17 ಮಂದಿ ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಸರ್ಕಾರ ರಚನೆಯಾಗಿದೆ ಎಂದು ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ದೇಶಕ್ಕೆ ಸ್ವಾತಂತ್ರ್ಯಬಂದ ರೀತಿ ಅನರ್ಹ ಶಾಸಕರ ತ್ಯಾಗದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪಕ್ಷ ತಮ್ಮನ್ನು ಗುರುತಿಸಿ ಸ್ಥಾನಮಾನ ನೀಡಿದೆ ಎಂದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಂಡಾಯವೆದ್ದು ಸಾಮೂಹಿಕ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದ 17 ಶಾಸಕರಿಗೆ ಬಿಜೆಪಿ ನಾಯಕರು ಬೆಂಬಲ ನೀಡಿದ್ದರು. ವಿಶೇಷ ವಿಮಾನದ ಮೂಲಕ ಅವರನ್ನು ಮುಂಬೈಗೆ ಕರೆದೊಯ್ದು ಐಷಾರಾಮಿ ಹೋಟೆಲ್​ನಲ್ಲಿ ಇರಿಸಲಾಗಿತ್ತು. ಇವರಿಗೆಲ್ಲಾ ಮಂತ್ರಿ ಸ್ಥಾನ ನೀಡುವ ಆಮಿಷವನ್ನು ನೀಡಲಾಗಿದ್ದು, ಇದಕ್ಕಾಗಿ ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗಿದೆ. ಸದ್ಯ ಅನರ್ಹ ಶಾಸಕರ ರಾಜಕೀಯ ಭವಿಷ್ಯ ಸುಪ್ರೀಂ ಕೋರ್ಟ್​ ಅಂಗಳದಲ್ಲಿದ್ದು, ಈ ತೀರ್ಪು ಬಂದ ಬಳಿಕ ಅವರು ಬಿಜೆಪಿ ಸರ್ಕಾರದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ನೀಡಿದ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ಮಂತ್ರಿ ಸ್ಥಾನ ನೀಡದಿದ್ದಕ್ಕೆ ಸಮಾಧಾನಪಡಿಸಲು ರಾಜಕೀಯ ಕಾರ್ಯದರ್ಶಿಯಾಗಿ ಮಾಡಿದ್ದಾರೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ ತಮಗೆ ಅಂತಹ ಯಾವುದೇ ಅಸಮಾಧಾನವಿಲ್ಲ. ತಮಗೆ ಪಕ್ಷ ಮೊದಲು. ಅಧಿಕಾರ, ಸ್ಥಾನಮಾನ ನಂತರ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಅಬಕಾರಿ ಸಚಿವ ಎಚ್.ನಾಗೇಶ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹುಚ್ಚು ಹುಚ್ಚಾದ ಹೇಳಿಕೆ ನೀಡುವುದನ್ನು ಅಬಕಾರಿ ಸಚಿವರು ನಿಲ್ಲಿಸಲಿ. ಮನೆ ಮನೆಗೆ, ಹಟ್ಟಿಗಳಿಗೆ ಮದ್ಯ ಸರಬರಾಜು ಮಾಡುವುದಾಗಿ ಹೇಳಿ ಸರ್ಕಾರದ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಬೇಡಿ. ಮುಖ್ಯಮಂತ್ರಿ ಅವರ ಸಲಹೆ ಪಡೆದು ಪ್ರಬುದ್ಧ ರಾಜಕಾರಣ ಮಾಡಿ ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!