ಯಾವುದೇ ಕಾರಣಕ್ಕೂ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ- ಸೊರಕೆ

ಉಡುಪಿ:  ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ರದ್ಧು ಪಡಿಸುವಂತೆ ಹಾಗೂ ಈ ರಸ್ತೆಯಲ್ಲಿ ಟೋಲ್ ಸ್ಥಾಪನೆ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸರಕಾರ ಇರುವಾಗ ಆರಂಭಗೊಂಡ ಪ್ರಕ್ರಿಯೆ ಇದಾಗಿದೆ. ಬೆಳ್ಮಣ್ ನಲ್ಲಿ ಟೋಲ್ ಹೋರಾಟಗಾರರ ಪ್ರತಿಭಟನೆಗೆ ಮಣಿದು ಬೊಮ್ಮಾಯಿ ಸರಕಾರ ಅದನ್ನು ಕಂಚಿನಡ್ಕಕ್ಕೆ ರವಾನಿಸಿದೆ. ಈಗ ಇಲ್ಲಿಂದಲೇ ಓಡಿಸುವ‌ ಉದ್ದೇಶಕ್ಕಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು. ಯಾವುದೇ ಕಾರಣಕ್ಕೂ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.

ಪಡುಬಿದ್ರಿ ಭಾಗದ ಹೆಜಮಾಡಿಯಲ್ಲಿ ಟೋಲ್ ಇರುವಾಗ ಮೂರು ಕಿ.ಮೀ. ಅಂತರದಲ್ಲಿ ಮತ್ತೊಂದು ಟೋಲ್ ಅಳವಡಿಕೆ ಮೂಲಕ ಜನರನ್ನು ಸುಲಿಗೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ಖಂಡಿಸಿ ಈ ಹೋರಾಟಕ್ಕೆ ಚಾಲನೆ ನೀಡಲಾಗಿದ್ದು, ಗುರುವಾರ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಉಡುಪಿ ಕಾಂಗ್ರೆಸ್‌ ಅಧ್ಯಕ್ಷ  ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್‌ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಶೇಖರ ಹೆಜ್ಮಾಡಿ, ಡಾ. ದೇವೀಪ್ರಸಾದ್‌ ಶೆಟ್ಟಿ, ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ನವೀನ್ ಚಂದ್ರ ಸುವರ್ಣ, ಸಂತೋಷ್‌ ಕುಲಾಲ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಿಶನ್ ಹೆಗ್ಡೆ, ಶೇಖ್ ವಾಹಿದ್, ದಿವಾಕರ್ ಶೆಟ್ಟಿ ಇದ್ದರು.

Leave a Reply

Your email address will not be published. Required fields are marked *

error: Content is protected !!