ಅಡ್ಯಾರ್: ಎಳನೀರು ಕುಡಿದು ಅಸ್ವಸ್ಥ ಪ್ರಕರಣ- ಫ್ಯಾಕ್ಟರಿಗೆ ಅಧಿಕಾರಿಗಳ ತಂಡ ಭೇಟಿ
ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನ ಎಳನೀರು ಫ್ಯಾಕ್ಟರಿಯಿಂದ ತಂದ ಎಳನೀರು ಕುಡಿದು ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವರದಿ ಆಧಾರದಲ್ಲಿ ದ.ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು ಫ್ಯಾಕ್ಟರಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಡಿಎಚ್‌ಒ ‘ಆರೋಗ್ಯ ಇಲಾಖೆ ತಂಡದಿಂದ ಎಳನೀರು ಪ್ಯಾಕ್ಟರಿಗೆ ಭೇಟಿ ನೀಡಿದ್ದೇವೆ. ಸುಮಾರು 15 ಲೀ. ಎಳನೀರನ್ನು ಪರೀಕ್ಷಾರ್ಥ ಸಂಗ್ರಹಣೆ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಮೂರು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ: ಅಸ್ವಸ್ಥರಾದ ಮೂರು ಮಂದಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಹಿಳೆಯರು ಮತ್ತು 12 ವರ್ಷದ ಮಗು ಸೇರಿದೆ. ಅವರ ಮೋಷನ್ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸುಮಾರು 13 ಮಂದಿ ಈಗಾಗಲೇ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಡಿಎಚ್ಒ ತಿಳಿಸಿದ್ದಾರೆ.
ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು- ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್: ಮಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲರಾ ಭೀತಿ ಎಂದು ತಪ್ಪು ಮಾಹಿತಿ ಹರಡಲಾಗುತ್ತಿದೆ. ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ತಿಳಿಸಿದ್ದಾರೆ. ತುಂಬೆ ಮತ್ತು ಅಡ್ಯಾರ್ ಪ್ರದೇಶದ ನಿವಾಸಿಗಳಲ್ಲಿ ವಾಂತಿ ಭೇದಿ ಕಂಡುಬಂದಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಳನೀರು ಫ್ಯಾಕ್ಟರಿಯ ಐಸ್ ಕ್ರೀಮ್ ಮತ್ತು ಎಳನೀರು ಕುಡಿದ ಬಳಿಕ ಜನರಲ್ಲಿ ವಾಂತಿ ಭೇದಿ ಕಂಡು ಬಂದಿರುವುದಾಗಿ ತಿಳಿದುಬಂದಿದೆ. ಸೋಮವಾರದಂದು ಫ್ಯಾಕ್ಟರಿಯ ಎಳನೀರು ಸೇವಿಸಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿರುವ ಕುರಿತು ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿಯವರು ಫ್ಯಾಕ್ಟರಿಗೆ ಭೇಟಿ ನೀಡಿ ಎಳನೀರು ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿರುತ್ತಾರೆ. ಇಡೀ ಫ್ಯಾಕ್ಟರಿಯನ್ನ ಬಂದ್ ಮಾಡಿ ಶುಚಿಗೊಳಿಸಲಾಗಿದೆ. ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಎಲ್ಲ ಕ್ರಮಗಳನ್ನ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾರ್ವಜನಿಕರು ಕಾಲರಾ ಎಂಬ ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.