28 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್- ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿಗೆ ಕೋಕ್?
ಬೆಂಗಳೂರು: ಇನ್ನು 2-3 ದಿನಗಳಲ್ಲಿ 28 ಕ್ಷೇತ್ರಗಳ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ಗೆ ರವಾನೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸುವ ಸಂಬಂಧ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಚರ್ಚೆ ನಡೆದಿದ್ದು, ಚರ್ಚೆಗೆ ಬಂದ ಎಲ್ಲ ಆಕಾಂಕ್ಷಿಗಳ ಹೆಸರುಗಳನ್ನು ಇನ್ನು 2–3 ದಿನಗಳಲ್ಲಿ ವರಿಷ್ಠರಿಗೆ ಕಳುಹಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಇಬ್ಬರು ವೀಕ್ಷಕರು ಕಳೆದ 2-3 ದಿನಗಳಿಂದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಕಾರ್ಯಕರ್ತರು ಮತ್ತು ನಾಯಕರ ಜತೆ ಚರ್ಚಿಸಿ, ಆಕಾಂಕ್ಷಿಗಳ ಹೆಸರುಗಳನ್ನು ಸಂಗ್ರಹಿಸಿದ್ದಾರೆ. ಆ ಹೆಸರುಗಳ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ನಡೆಯಿತು. ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲುವ ವಾತಾವರಣವಿದೆ. ಬಿಜೆಪಿ– ಜೆಡಿಎಸ್ ಜತೆಯಾಗಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಎಲ್ಲ ಸ್ಥಾನಗಳನ್ನು ಗೆದ್ದು ದಾಖಲೆ ಸೃಷ್ಟಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಯಾರನ್ನೆಲ್ಲ ಕಣಕ್ಕೆ ಇಳಿಸಬೇಕು ಎಂಬ ತೀರ್ಮಾನವನ್ನು ವರಿಷ್ಠರೇ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
“ಇನ್ನೆರಡು ಮೂರು ದಿನಗಳಲ್ಲಿ ಹೆಸರು ಕಳುಹಿಸುತ್ತೇವೆ ಆಕಾಂಕ್ಷಿಗಳ ಹೆಸರು ಕಳುಹಿಸುವುದು ನಮ್ಮ ಕರ್ತವ್ಯ. ಎಲ್ಲಾ ಹೆಸರುಗಳನ್ನು ಕಳುಹಿಸುತ್ತೇವೆ. ಆದರೆ ಚುನಾವಣಾ ನಿರ್ವಹಣಾ ಸಮಿತಿಯು ಸೂಕ್ತವೆಂದು ಭಾವಿಸಿದೆವು. ಪಟ್ಟಿ ಕುರಿತು ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಸಭೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಡಿವಿ ಸದಾನಂದಗೌಡ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಡಾ.ಸಿ.ಎನ್.ಅಶ್ವತರಾಯರು, ಸಿ.ಟಿ.ರವಿ. ಸಹ ಉಪಸ್ಥಿತರಿದ್ದರು.
ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?
ಮೂಲಗಳ ಪ್ರಕಾರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಳಿಯ, ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಹೆಸರು ಪ್ರಸ್ತಾಪವಾಗಿದೆ. ಹಾಲಿ ಸಂಸದರಾದ ಡಿವಿ ಸದಾನಂದಗೌಡ ಮತ್ತು ವಿ ಶ್ರೀನಿವಾಸ್ ಪ್ರಸಾದ್ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಮತ್ತು ಚಾಮರಾಜನಗರಕ್ಕೆ ಹೊಸ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ.
ಹುಬ್ಬಳ್ಳಿ ಧಾರವಾಡದಿಂದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಉಡುಪಿಯಿಂದ ಶೋಭಾ ಕರಂದ್ಲಾಜೆ ಸೇರಿದಂತೆ ಕೆಲವು ಹಾಲಿ ಸಂಸದರನ್ನು ನಾಮನಿರ್ದೇಶನ ಮಾಡಲು ತೀರ್ಮಾನಿಸಲಾಗಿದೆ. ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಮತ್ತು ಬೆಳಗಾವಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮತ್ತೊಬ್ಬ ಹೊಸ ಮುಖವನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಸೋಮಣ್ಣ ಅವರಿಗೆ ಲೋಕಸಭೆ ಟಿಕೆಟ್ ನಿರಾಕರಿಸಿದರೆ ಮುಂದಿನ ವಿಧಾನಸಭಾ ಚುನಾವಣೆಗೆ ಅವರನ್ನು ಬೆಂಗಳೂರಿನ ಗೋವಿಂದರಾಜನಗರದ ಅಭ್ಯರ್ಥಿಯನ್ನಾಗಿ ಪಕ್ಷದ ಹೈಕಮಾಂಡ್ ಪರಿಗಣಿಸುವ ಸಾಧ್ಯತೆ ಇದೆ. ಅಂತೆಯೇ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ವಿಶ್ವನಾಥ್ ಅವರ ಹೆಸರು ಕೂಡ ಚರ್ಚೆಗೆ ಬಂದಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಿರಿಯ ಸಹೋದರ ಸಂಸದ ಡಿ.ಕೆ.ಸುರೇಶ್ ಅವರ ವಿರುದ್ಧವೂ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಅಚ್ಚರಿಯ ಹೆಸರು?
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲು ಹೆಚ್ಚಿನ ಕಾರ್ಯಕರ್ತರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊಸ ಅಭ್ಯರ್ಥಿಗೆ ಮಣೆ ಹಾಕುವ ಸಾಧ್ಯತೆ ಬಹುತೇಕ ಖಚಿತ ಎನ್ನಲಾಗಿದೆ. ಈ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟಿಕೆಟ್ಗಾಗಿ ಶೋಭಾ ಕರಂದ್ಲಾಜೆ ವಿರುದ್ಧ ನೇರವಾಗಿ ಅಖಾಡಕ್ಕೆ ಇಳಿದಿದ್ದು, ಮಾತ್ರವಲ್ಲದೆ ಪಕ್ಷಕ್ಕೂ ಡ್ಯಾಮೇಜ್ ಮಾಡುತ್ತಿರುವುದರಿಂದ ಅವರ ವಿರುದ್ಧ ರಾಜ್ಯ ಬಿಜೆಪಿ ಕೆಂಡಾಮಂಡಲವಾಗಿದೆ.
ಆದ್ದರಿಂದ ಹೊಸ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾಧ್ಯಕ್ಷರಾದ ಕೆ.ಉದಯ ಕುಮಾರ್ ಶೆಟ್ಟಿ ಹೆಸರು ಕೇಳಿ ಬರುತ್ತಿದೆ.